ಮುಂಬೈ : ಟಿಸಿಎಸ್ ಕಾರ್ಪೊರೇಟ್ ಜಿಹಾದ್ ಪ್ರಕರಣದ ಮಾಸ್ಟರ್‌ಮೈಂಡ್ ನಿದಾ ಖಾನ್‌ಳನ್ನು ವಿಶೇಷ ತನಿಖಾ ತಂಡ ಸಂಭಾಜಿನಗರದಲ್ಲಿ ಬಂಧಿಸಿದೆ. ಟಿಸಿಎಸ್‌ನಲ್ಲಿ ನಡೆದ ಮತಾಂತರ ಆರೋಪದ ಕುರಿತು ನಿದಾ ಖಾನ್ ವಿರುದ್ಧ ಹಲವಾರು ದೂರುಗಳು ದಾಖಲಾದ ನಂತರ ಆಕೆ ನಾಪತ್ತೆಯಾಗಿದ್ದಳು. ಸುಮಾರು 25 ದಿನಗಳ ಕಾಲ ಆಕೆ ತಲೆಮರೆಸಿಕೊಂಡಿದ್ದಳು.
ಅಲ್ಲದೇ ಎಫ್‌ಐಆರ್‌ದ ದಾಖಲಾದ ನಂತರ ಬಂಧನದಿಂದ ಬಚಾವ್ ಆಗಲು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಳು. ಆದರೆ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ನಿದಾ ಕಳೆದ ನಾಲ್ಕು ದಿನಗಳಿಂದ ಛತ್ರಪತಿ ಸಂಭಾಜಿನಗರದ ನರೇಗಾಂವ್ ಪ್ರದೇಶದ ಕೈಸರ್ ಕಾಲೋನಿಯಲ್ಲಿರುವ ಫ್ಲಾಟ್‌ನಲ್ಲಿ ತನ್ನ ಪೋಷಕರ ಜೊತೆ ವಾಸಿಸುತ್ತಿದ್ದಳು. ಈಕೆಯನ್ನು ಬಂಧಿಸುವ ಎರಡು ದಿನಗಳ ಮೊದಲು ಫ್ಲ್ಯಾಟ್ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಛತ್ರಪತಿ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಬಳಿಕ ಟ್ರಾನ್ಸಿಟ್ ರಿಮಾಂಡ್ ಮೂಲಕ ವಶಕ್ಕೆ ಪಡೆದು, ನಾಸಿಕ್‌ಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರು ಪುರುಷರು ಮತ್ತು ಓರ್ವ ಹೆಚ್‌ಆರ್ ಹೆಡ್ ಸೇರಿದಂತೆ 7 ಉದ್ಯೋಗಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.















