ಮನೆ ಸುದ್ದಿ ಜಾಲ ಕೋಟಿ ಬೆಲೆ ಬಾಳುವ ಆಸ್ತಿ ವಿವಾದ :  ಶ್ರೀದೇವಿ ಕುಟುಂಬಕ್ಕೆ ಜಯ

ಕೋಟಿ ಬೆಲೆ ಬಾಳುವ ಆಸ್ತಿ ವಿವಾದ :  ಶ್ರೀದೇವಿ ಕುಟುಂಬಕ್ಕೆ ಜಯ

0

ಬಾಲಿವುಡ್‌ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಹಾಗೂ ಅವರ ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರಿಗೆ ಕಾನೂನು ಹೋರಾಟದಲ್ಲಿ ದೊಡ್ಡ ಜಯ ಸಿಕ್ಕಿದೆ. ನಟಿ ಶ್ರೀದೇವಿ ಅವರು  1988ರಲ್ಲಿ ಖರೀದಿಸಿದ್ದ ಚೆನ್ನೈನ ಆಸ್ತಿಯ ಮೇಲೆ ಹೂಡಲಾಗಿದ್ದ ಸಿವಿಲ್ ದಾವೆಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಇದರಿಂದ ಕಪೂರ್ ಕುಟುಂಬಕ್ಕೆ ಸಮಾಧಾನ ಸಿಕ್ಕಂತೆ ಆಗಿದೆ ಎನ್ನಲಾಗಿದೆ. ಚೆನ್ನೈನ ಶೋಲಿಂಗನಲ್ಲೂರ್‌ನಲ್ಲಿರುವ ಸುಮಾರು 2.70 ಎಕರೆ ಭೂಮಿಗೆ ಸಂಬಂಧಿಸಿದಂತೆ ಈ ವಿವಾದ ಉಂಟಾಗಿತ್ತು. ಎಂ.ಸಿ. ಶಿವಕಾಮಿ ಮತ್ತು ಇತರರು ಈ ಭೂಮಿ ತಮ್ಮದು ಎಂದು ವಾದಿಸಿ ಕೋರ್ಟ್ ಮೆಟ್ಟಿಲೇರಿದ್ದರು ಎನ್ನಲಾಗಿತ್ತು.

ಈ ವಿಷಯದ ಕುರಿತ್ತಾಗಿ 1988ರಲ್ಲಿ ಶ್ರೀದೇವಿ ಖರೀದಿ ಮಾಡಿದ್ದ ಈ ಜಾಗದ ಪತ್ರಗಳು ಕಾನೂನುಬದ್ಧವಾಗಿಲ್ಲ ಮತ್ತು ಈ ಜಾಗ ನಮಗೆ ಸೇರಬೇಕು ಎಂಬುದು ಶಿವಕಾಮಿ ಅವರ ವಾದ ಆಗಿತ್ತು. 1940ರ ದಾಖಲೆಗಳನ್ನು ಮುಂದಿಟ್ಟುಕೊಂಡು 2025ರಲ್ಲಿ ಈ ದಾವೆ ಹೂಡಲಾಗಿತ್ತು.ಬೋನಿ ಕಪೂರ್ ಪರ ವಕೀಲರು ಈ ಅರ್ಜಿಯನ್ನು ಬಲವಾಗಿ ವಿರೋಧಿಸಿದ್ದರು. 1988ರಲ್ಲಿ ನಡೆದ ವ್ಯವಹಾರವನ್ನು ಸುಮಾರು 40 ವರ್ಷಗಳ ನಂತರ ಪ್ರಶ್ನಿಸುವುದು ಸರಿಯಲ್ಲ ಎಂದು ವಾದಿಸಿದರು. ಕೇವಲ ಆಸ್ತಿ ಬಾಚಿಕೊಳ್ಳುವ ಉದ್ದೇಶದಿಂದ ಈಗ ಸುಳ್ಳು ವಾರಸುದಾರರ ಪ್ರಮಾಣಪತ್ರ ನೀಡಿ ದಾವೆ ಹೂಡಲಾಗಿದೆ ಎಂದು ಕಪೂರ್ ಕುಟುಂಬದ ಪರ ವಕೀಲರು ವಾದಿಸಿದ್ದರು ಎನ್ನಲಾಗಿದೆ.

ಈ ಪ್ರಕರಣದ ವಾದ-ವಿವಾದ ಆಲಿಸಿದ ನ್ಯಾಯಮೂರ್ತಿ ಟಿ.ವಿ. ತಮಿಳ್‌ಸೆಲ್ವಿ ಅವರು ಕಪೂರ್ ಕುಟುಂಬದ ವಾದವನ್ನು ಪುರಸ್ಕರಿಸಿದ್ದಾರೆ. ಸುಮಾರು ನಾಲ್ಕು ದಶಕಗಳ ನಂತರ ಹೂಡಿರುವ ಈ ಪ್ರಕರಣವು ಕಾಲಮಿತಿಯ ನಿಯಮವನ್ನು ಉಲ್ಲಂಘಿಸಿದೆ ಎಂದು ಕೋರ್ಟ್ ಹೇಳಿದೆ. ದೂರುದಾರರು ಸಲ್ಲಿಸಿದ್ದ ವಾರಸುದಾರರ ಪ್ರಮಾಣಪತ್ರ ಈಗಾಗಲೇ ರದ್ದಾಗಿರುವುದನ್ನು ಗಮನಿಸಿದ ನ್ಯಾಯಾಲಯ, ಆಸ್ತಿ ಕಬಳಿಸುವ ಉದ್ದೇಶದಿಂದ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಖಾರವಾಗಿ ಹೇಳಿ ದಾವೆಯನ್ನು ವಜಾಗೊಳಿಸಿದೆ. ಶ್ರೀದೇವಿ ಅವರ ನಿಧನದ ನಂತರ ಈ ಆಸ್ತಿ ಕಾನೂನುಬದ್ಧವಾಗಿ ಬೋನಿ ಕಪೂರ್ ಮತ್ತು ಅವರ ಇಬ್ಬರು ಪುತ್ರಿಯರಿಗೆ ಸೇರಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ಮೂಲಕ ಚೆಂಗಲ್ಪಟ್ಟು ನ್ಯಾಯಾಲಯ ನೀಡಿದ್ದ ಹಿಂದಿನ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಕಪೂರ್ ಕುಟುಂಬಕ್ಕೆ ಜಯ ತಂದುಕೊಟ್ಟಿದೆ ಎಂಬ ಮಾಹಿತಿ ತಿಳಿದುಬಂದಿದೆ ಎನ್ನಲಾಗುತ್ತಿದೆ.