ಮನೆ ಸುದ್ದಿ ಜಾಲ ಬಯಲು ಸೀಮೆಯಲ್ಲಿ ಹೆಚ್ಚಾದ ನೀರಿನ ಕೊರತೆ, ತೋಟ ಉಳಿವಿಗೆ ಟ್ಯಾಂಕರ್ ​ನಿಂದ ನೀರು : ಚಿಕ್ಕಮಗಳೂರು

ಬಯಲು ಸೀಮೆಯಲ್ಲಿ ಹೆಚ್ಚಾದ ನೀರಿನ ಕೊರತೆ, ತೋಟ ಉಳಿವಿಗೆ ಟ್ಯಾಂಕರ್ ​ನಿಂದ ನೀರು : ಚಿಕ್ಕಮಗಳೂರು

0

ಚಿಕ್ಕಮಗಳೂರುಜಿಲ್ಲೆಯ ಬಯಲುಸೀಮೆ ಭಾಗಗಳಲ್ಲಿ ತೀವ್ರ ನೀರಿನ ಕೊರತೆ ಉಂಟಾಗಿದ್ದು, ಅಡಿಕೆ ಹಾಗೂ ಇತರ ತೋಟಗಾರಿಕಾ ಬೆಳೆಗಳನ್ನು ಉಳಿಸಿ ಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಅಜ್ಜಂಪುರ, ಕಡೂರು ಭಾಗಗಳಲ್ಲಿ ಕಳೆದ ಮೂರು ತಿಂಗಳಿಂದ ಸಮರ್ಪಕ ಮಳೆಯಾಗದೇ ಕೆರೆ – ಕೊಳಗಳು ಬರಿದಾಗಿದ್ದು, ಕೊಳವೆ ಬಾವಿಗಳಲ್ಲೂ ನೀರಿನ ಮಟ್ಟ ಕುಸಿದಿದೆ. ಪರಿಣಾಮ ರೈತರು ಟ್ಯಾಂಕರ್ ಮೂಲಕ ನೀರು ತಂದು ತೋಟಗಳಿಗೆ ಹಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು. ತರೀಕೆರೆ ತಾಲೂಕಿನ ಕುಡ್ಲೂರು, ಮುಂಡ್ರೆ, ದೊಡ್ಡಘಟ್ಟ, ಕೊರಟಗೆರೆ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಜೊತೆಗೆ ಕೃಷಿಗೂ ಭಾರಿ ಸಂಕಷ್ಟ ಎದುರಾಗಿದೆ ಎನ್ನಲಾಗುತ್ತಿದೆ.

ಆದರಿಂದ ವಿಶೇಷವಾಗಿ ಅಡಿಕೆ ತೋಟಗಳು ನೀರಿನ ಕೊರತೆಯಿಂದ ಒಣಗುವ ಭೀತಿ ಎದುರಿಸುತ್ತಿದ್ದು, ಬೆಳೆಗಾರರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ದಿನರಾತ್ರಿ ಶ್ರಮಿಸುತ್ತಿದ್ದಾರೆ. ಕೆಲ ರೈತರು ಟ್ಯಾಂಕರ್‌ಗಳಿಂದ ನೀರು ತಂದು ತೋಟಗಳಿಗೆ ಹಾಯಿಸುತ್ತಿದ್ದರೆ, ಇನ್ನೂ ಕೆಲವರು ತೋಟದಲ್ಲೇ ಸಣ್ಣ ಕೆರೆ ಅಥವಾ ಟ್ಯಾಂಕ್ ನಿರ್ಮಿಸಿ ನೀರು ಸಂಗ್ರಹಿಸಿಕೊಂಡು ಮೋಟಾರ್ ಹಾಗೂ ಡ್ರಿಪ್ ವ್ಯವಸ್ಥೆಯ ಮೂಲಕ ಗಿಡಗಳಿಗೆ ನೀರು ಪೂರೈಸುತ್ತಿದ್ದಾರೆ. ಒಂದು ಕಡೆ ಮಲೆನಾಡು ಭಾಗಗಳಲ್ಲಿ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಅಲ್ಲಿನ ಕಾಫಿ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದರೆ,  ಹಾಗೂ ಮತ್ತೊಂದೆಡೆ ಬಯಲುಸೀಮೆ ಭಾಗದ ರೈತರು ಆಕಾಶದತ್ತ ಮುಖಮಾಡಿ ಮಳೆಯ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದ್ದಾರೆ ಎನ್ನಲಾಗಿದೆ.

ಈ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಅಡಿಕೆ, ತೆಂಗು ಹಾಗೂ ಇತರ ತೋಟಗಾರಿಕಾ ಬೆಳೆಗಳು ಒಣಗುವ ಆತಂಕ ಹೆಚ್ಚಾಗಿದೆ. “ಒಂದು ಟ್ಯಾಂಕರ್ ನೀರಿಗೆ ಸಾವಿರಾರು ರೂಪಾಯಿ ಖರ್ಚಾಗುತ್ತಿದೆ. ಆದರೂ ಗಿಡಗಳನ್ನು ಉಳಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ಹಲವು ವರ್ಷಗಳ ಪರಿಶ್ರಮ ನಾಶವಾಗುತ್ತದೆ” ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ನೀರಿನ ಕೊರತೆಯಿಂದ ಜಾನುವಾರುಗಳಿಗೂ ಸಮಸ್ಯೆ ಎದುರಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಜೀವನ ದುಸ್ತರವಾಗಿದೆ. ಕೆಲವೆಡೆ ಗ್ರಾಮ ಪಂಚಾಯಿತಿಗಳು ಹಾಗೂ ಸ್ಥಳೀಯ ಆಡಳಿತ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಂಡಿದ್ದರೂ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ನೀರು ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ರೈತರು ಸರ್ಕಾರದಿಂದ ತುರ್ತು ಪರಿಹಾರ ಕ್ರಮ, ಬೆಳೆ ಪರಿಹಾರ ಹಾಗೂ ನೀರಾವರಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.