ಬೆಂಗಳೂರು: ಯುವಕನೊಬ್ಬ ತಾನು ಪ್ರೀತಿಸಿದ ಯುವತಿಯನ್ನು ಕರೆದೊಯ್ದಿರುವ ಕಾರಣಕ್ಕೆ ಯುವಕನ ಸಹೋದರನನ್ನು ಯುವತಿಯ ಪೋಷಕರು ಅಪಹರಿಸಿ ಕೈಕಾಲು ಕಟ್ಟಿ ಹಾಕಿ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದ್ದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಅಸಲಿಗೆ ಯುವಕನ ಸಹೋದರ ಮತ್ತು ಯುವತಿಯ ಪೋಷಕರೇ ಪ್ಲಾನ್ ಮಾಡಿ ಈ ರೀತಿಯ ವಿಡಿಯೋ ಮಾಡಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಯುವತಿಯ ಪೋಷಕರಾದ ಬಸವರಾಜು, ಉಮೇಶ್ ಸ್ವಾಮಿ, ವಿರೂಪಾಕ್ಷ ಸೇರಿ ನಾಲ್ವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದ್ದು ಇನ್ನು ವಿಡಿಯೋ ಮಾಡಲು ಸಹಕಾರ ನೀಡಿದ ಯುವಕನ ಸಹೋದರ ಕೋಟ್ರೇಶ್‌ಗೂ ಎಚ್ಚರಿಕೆ ನೀಡಿ, ಕರೆದಾಗ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಬ್ಯಾಡರಹಳ್ಳಿಯ ವಿಶ್ವೇಶ್ವರನಗರ ನಿವಾಸಿ, ಬಳ್ಳಾರಿ ಮೂಲದ ಶಿವು ಮತ್ತು ಆತನ ಸಹೋದರ ಕೋಟ್ರೇಶ್ ದೇವಸ್ಥಾನವೊಂದರಲ್ಲಿ ಅರ್ಚಕರಾಗಿದ್ದಾರೆ. ಅವರ ಮಾವನ ಮಗಳು ನಗರದ ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಈ ಮಧ್ಯೆ 8 ವರ್ಷಗಳಿಂದ ಶಿವು ತನ್ನ ಮಾವನ ಮಗಳನ್ನು ಪ್ರೀತಿಸುತ್ತಿದ್ದ. ಈ ಕುರಿತು ಶಿವು ಮತ್ತು ಆತನ ಪೋಷಕರು ಮದುವೆ ಮಾಡಿಕೊಡುವಂತೆ ಯುವತಿಯ ತಂದೆಗೆ ಕೇಳಿದ್ದಾರೆ. ಆದರೆ, ದೇವಸ್ಥಾನದಲ್ಲಿ ಅರ್ಚಕ ವೃತ್ತಿ ಮಾಡಿಕೊಂಡಿದ್ದರಿಂದ ಅವರು ನಿರಾಕರಿಸಿದ್ದರು. ಆದ್ದರಿಂದ ಶಿವು ತನ್ನ ಪ್ರೇಯಸಿ ಜತೆ ಕೆಲ ದಿನಗಳ ಹಿಂದೆ ಪರಾರಿಯಾಗಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯುವತಿಯ ಪೋಷಕರು ಶಿವು ಸಹೋದರ ಕೋಟ್ರೇಶ್‌ನನ್ನು ಪ್ರಶ್ನಿಸಿ ಹಲ್ಲೆ ನಡೆಸಿದಂತೆ ನಾಟಕವಾಡಿ ಬಳಿಕ ಇಬ್ಬರು ಸೇರಿ ಅಪಹರಣದ ಕಥೆ ಸೃಷ್ಟಿಸಿದ್ದರು ಎನ್ನುವುದು ತಿಳಿದುಬಂದಿದೆ.
ಅದರಂತೆ ಯುವತಿಯ ಪೋಷಕರು, ಕೋಟ್ರೇಶ್‌ನನ್ನು ಅಪಹರಿಸಿದಂತೆ ಮಾಡಿ, ಇಶಾ ಫೌಂಡೇಶ್‌ನ ಬಳಿ ಇರುವ ಸಂಬಂಧಿಯೊಬ್ಬರ ಮನೆಗೆ ಕರೆದೊಯ್ದು, ಹಲ್ಲೆ ಮಾಡಿದಂತೆ ವಿಡಿಯೋ ಮಾಡಿದ್ದಾರೆ. ಬಳಿಕ ಕೋಟ್ರೇಶ್ ಮೂಲಕ, ಶಿವು ಎಲ್ಲಿದ್ದರೂ ಅವರ ಯುವತಿಯನ್ನು ವಾಪಸ್ ಕರೆತಂದು ಅವರಿಗೆ ಒಪ್ಪಿಸಿ, ನನ್ನನ್ನು ಕರೆದೊಯ್ಯುವಂತೆ ವಿಡಿಯೋ ಮಾಡಿ, ಶಿವುಗೆ ಕಳುಹಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೋಟ್ರೇಶ್ ಸಂಬಂಧಿಯೊಬ್ಬರು ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೋಟ್ರೇಶ್, ಯುವತಿಯ ಪೋಷಕರು ಹಾಗೂ ಇತರರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಇದು ಅಪಹರಣದ ನಾಟಕ ಎಂದು ತಿಳಿದುಬಂದಿದೆ .
















