‘ಗೋಲ್ಡನ್ ಮೂವೀಸ್’ ಲಾಂಛನದಡಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ಪ್ರಸ್ತುತ ಕನ್ನಡ ಹಾಗೂ ತುಳು ಭಾಷೆಯಲ್ಲಿ ನಿರ್ಮಿಸಿರುವ ಚಿತ್ರ ‘ಪಿಚ್ಚರ್’. ತಮ್ಮ ನಿರ್ಮಾಣದ ಈ ಚಿತ್ರದ ಮೂಲಕವೇ ಶಿಲ್ಪಾ ಗಣೇಶ್ ಚಿತ್ರರಂಗದಲ್ಲಿ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸಂದೀಪ ಬೆದ್ರ ನಿರ್ದೇಶನದ ಈ ಪಿಕ್ಚರ್ ಚಿತ್ರದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ ಶಿಲ್ಪಾ ಗಣೇಶ್ ಅವರು ಈ ಚಿತ್ರಕ್ಕೆ ನಿರ್ಮಾಪಕಿ ಮಾತ್ರವಲ್ಲ, ಗಾಯಕಿಯೂ ಹೌದು. ‘ಗೋಕುಲದ ರಾಧೆ’ ಎಂಬ ಹಾಡನ್ನು ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲೂ ಹಾಡಿದ್ದಾರೆ. ಈ ಮೂಲಕ ನಿರ್ಮಾಪಕಿ ಶಿಲ್ಪಾ ಗಣೇಶ್ ಗಾಯಕಿಯಾಗಿ ಹೊರಹೊಮ್ಮಿದ್ದಾರೆ. ಶಿಲ್ಪಾ ಗಣೇಶ್ ಜೊತೆಗೆ ಗಾಯಕ ಜಸ್ಕರಣ್ ಸಿಂಗ್ ಈ ಸುಮಧುರ ಹಾಡಿಗೆ ಕಂಠದಾನ ಮಾಡಿದ್ದಾರೆ.
ಹಾಗೂ ಕನ್ನಡದಲ್ಲಿ ಅರಸು ಅಂತಾರೆ ಹಾಗೂ ತುಳುವಿನಲ್ಲಿ ಕೀರ್ತನ್ ಭಂಡಾರಿ ಈ ಹಾಡನ್ನು ರಚಿಸಿದ್ದಾರೆ. ಸ್ಯಾಮ್ಯುಯೆಲ್ ಅಭಿ ಸಂಗೀತ ನೀಡಿದ್ದಾರೆ. ಕಾಶ್ಮೀರದಲ್ಲಿ ಈ ಹಾಡಿನ ಚಿತ್ರೀಕರಣ ಆಗಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಹಾಡು ಬಿಡುಗಡೆಯಾಗಿದೆ. ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಕೌಟುಂಬಿಕ, ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮನೋರಂಜನೆಯೇ ಪ್ರಧಾನ. ನಿರ್ದೇಶಕ ಸಂದೀಪ್ ಬೆದ್ರ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಕಳೆದ 15 ವರ್ಷಗಳಿಂದ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿತ್ತಿದ್ದ ಇವರು ಈ ಪ್ರಾಜೆಕ್ಟ್ ಮುಖೇನ ಸ್ವತಂತ್ರ್ಯ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ. ಉಳಿದಂತೆ ಸಂತೋಷ್ ರೈ ಪಾತಾಜೆ ಹಾಗೂ ಚಂದ್ರಶೇಖರ್.ಕೆ.ಎಸ್ ಅವರ ಕ್ಯಾಮರಾ ಕೈಚಳಕವಿದೆ. ರಾಜು ಆರ್ಯನ್ ಸಂಕಲನ ನಿರ್ವಹಿಸಿದ್ರೆ, ಧನಂಜಯ್.ಬಿ ಮತ್ತು ಶ್ರೀರಾಜು ನೃತ್ಯ ನಿರ್ದೇಶನ ಮಾಡಿದ್ದಾರೆ.
ರಾಧೇಶ್ ಹಾಗೂ ಸಂತೋಷ್ ಪೂಜಾರಿ ಅವರ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಇರುವ ಈ ಚಿತ್ರಕ್ಕೆ ಮೋಹನ್ ಭಟ್ಕಳ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ ಎನ್ನಲಾಗಿದ್ದು ನಿತ್ಯಪ್ರಕಾಶ್ ಬಂಟ್ವಾಳ್ ಚಿತ್ರದ ನಾಯಕನಾಗಿ ಜೀವ ಪಾತ್ರಕ್ಕೆ ತುಂಬಿದ್ದು, ನಾಯಕಿಯಾಗಿ ಅಮೃತಾ ಸುದು ಸಾಥ್ ನೀಡಿದ್ದಾರೆ. ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ, ವಜ್ರಧೀರ್ ಜೈನ್, ಸದಾಶಿವ ಅಮಿನ್, ಪ್ರಸನ್ನ ಶೆಟ್ಟಿ ಬೈಲೂರ್, ಸಂದೀಪ್ ಶೆಟ್ಟಿ ಮಾಣಿ, ಉಮೇಶ್ ಮಿಜಾರ್, ಜಯಶೀಲ ಮರೊಲಿ, ರೂಪ ವರ್ಕಾಡಿ, ರವಿ ರಾಮಕುಂಜ, ಪುಷ್ಪರಾಜ್ ಬೊಳಾರ್, ಅನಿಲ್ ಉಪ್ಪಳ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಮಂಗಳೂರು, ಬಂಟ್ವಾಳ, ಕಾಶ್ಮೀರ ಸೇರಿ ಕೆಲವು ಕಡೆಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡಿರುವ “ಪಿಚ್ಚರ್” ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಶೀಘ್ರದಲ್ಲೇ ಚಿತ್ರತಂಡ ಬಿಡುಗಡೆ ದಿನಾಂಕ ಘೋಷಿಸಲಿದೆ ಎನ್ನಲಾಗಿದೆ.
















