ಮೈಸೂರು (Mysuru): ಟಿಪ್ಪು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ನಕಲಿ ಸಂಚಾರಿ ಟಿಕೆಟ್ ಪರೀಕ್ಷಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಕಲಿ ಟಿಕೆಟ್ ಪರೀಕ್ಷಕ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ನಿವಾಸಿ ಮಲ್ಲೇಶ್ ಎಂಬವನಾಗಿದ್ದು, ಈತನನ್ನು ರೈಲ್ವೆಯ ಟಿಕೆಟ್ ಪರೀಕ್ಷಕ ಸಿಬ್ಬಂದಿಯು ಹಿಡಿದಿದು ರೈಲ್ವೆ ಪೊಲೀಸರಿಗೆ ಒಪ್ಪಿಸಲಾಗಿದೆ.
ರೈಲು ಗಾಡಿ ಸಂಖ್ಯೆ 12613 ಮೈಸೂರು-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಟಿಕೆಟ್ ಪರೀಕ್ಷಕ ಉಪ ಮುಖ್ಯಸ್ಥರಾದ ಪಿ.ಚೇತನ್ ಅವರು ಎಸಿ ಮೆಕ್ಯಾನಿಕ್ ರವಿ ಅವರೊಂದಿಗೆ, ಅಪರಾಧಿಯು ರೈಲಿನಲ್ಲಿ ನಕಲಿ ರೈಲ್ವೆ ಟ್ಯಾಗ್ ಮತ್ತು ಅರ್ಧ ಸಮವಸ್ತ್ರ ಧರಿಸಿ ವಾಕಿಟಾಕಿಯೊಂದಿಗೆ ಅನುಮಾನಾಸ್ಪದವಾಗಿ ಚಲಿಸುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.
ರೈಲಿನಲ್ಲಿ ಆತನ ಉಪಸ್ಥಿತಿ ಮತ್ತು ಗುರುತಿನ ಬಗ್ಗೆ ವಿಚಾರಿಸಿದಾಗ ಅವನು ಅನುಮಾನಾಸ್ಪದವಾಗಿ ಸಂಚರಿಸುತ್ತಿರುವುದು ಕಂಡುಬಂದಿದ್ದು, ತಕ್ಷಣ ಎಚ್ಚೆತ್ತ ಸಿಬ್ಬಂದಿ ಆತನನ್ನು ಹಿಡಿದು ಮೈಸೂರು ನಿಲ್ದಾಣದ ಟಿಕೆಟ್ ಲಾಬಿಯಲ್ಲಿರುವ ಟಿಕೆಟ್ ಪರೀಕ್ಷಕರ ಉಸ್ತುವಾರಿಯಾದ ಸಿ.ಎಸ್. ಭಾಸ್ಕರ್ ಅವರಿಗೆ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ತಾನೊಬ್ಬ ಸಂಚಾರಿ ಟಿಕೆಟ್ ಪರೀಕ್ಷಕ ಎಂದು ಬಿಂಬಿಸಿಕೊಂಡು ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಧರ್ಮಾವರಂ ಮಾರ್ಗಗಳೂ ಸೇರಿದಂತೆ ದೂರ ಪ್ರಯಾಣದ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ರೈಲು ಯಾತ್ರಿಕರನ್ನು ಗುರಿಯಾಗಿಸಿಕೊಂಡು ಅಕ್ರಮವಾಗಿ ದಂಡ ವಿಧಿಸುತ್ತಿದ್ದ ಮತ್ತು ಅಮಾಯಕ ಪ್ರಯಾಣಿಕರಿಂದ ಹಣ ಸಂಗ್ರಹಿಸುತ್ತಿದ್ದ ಎಂದು ತಿಳಿದುಬಂದಿದೆ. ಆತನನ್ನು ಸರ್ಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಹೆಚ್ಚಿನ ತನಿಖೆ ಪ್ರಕ್ರಿಯೆಯಲ್ಲಿದೆ.
ಪ್ರಯಾಣಿಕರು ಮತ್ತು ಸಾರ್ವಜನಿಕರು ರೈಲಿನಲ್ಲಿ ಅಥವಾ ರೈಲ್ವೆ ಆವರಣದಲ್ಲಿ ಕಂಡುಬರುವ ಯಾವುದೇ ರೀತಿಯ ಅನುಮಾನಾಸ್ಪದ ನಡವಳಿಕೆಯ ವ್ಯಕ್ತಿಯ ಬಗ್ಗೆ ರೈಲ್ವೆ ಆಡಳಿತಕ್ಕೆ – ಸಹಾಯವಾಣಿ/ದೂರು ಸಂಖ್ಯೆ 139 ಅಥವಾ 182ಕ್ಕೆ ಕರೆ ಮಾಡಿ ತಿಳಿಸುವಂತೆ ಮೈಸೂರು ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಡಾ.ಮಂಜುನಾಥ್ ಕನಮಡಿ ಮನವಿ ಮಾಡಿದ್ದಾರೆ.