ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್ ಹಾಗೂ ಸಿಮ್ ಕಾರ್ಡ್ ಪತ್ತೆಯಾಗಿರುವ ಘಟನೆ ರಾಜ್ಯದ ಕಾರಾಗೃಹ ಇಲಾಖೆಯ ಭದ್ರತಾ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜೈಲಿನೊಳಗೆ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಗಳು ಆಗಾಗ ಕೇಳಿಬರುತ್ತಿರುವ ನಡುವೆಯೇ ಇದೀಗ ಮತ್ತೊಮ್ಮೆ ಮೊಬೈಲ್ ಹಾಗೂ ಸಿಮ್ ಕಾರ್ಡ್ ಸಿಕ್ಕಿರುವುದು ಸಂಚಲನ ಮೂಡಿಸಿದೆ. ಹಲವು ಬಾರಿ ಶಿಸ್ತು ಕ್ರಮ ಕೈಗೊಂಡಿದ್ದರೂ ಕೈದಿಗಳ ಕೈಗೆ ಮೊಬೈಲ್ ತಲುಪುತ್ತಿರುವುದು ಜೈಲು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಜೈಲು ಅಧಿಕಾರಿಗಳು ನಡೆಸಿದ ನಿಯಮಿತ ಪರಿಶೀಲನೆ ವೇಳೆ ವಿವಿಧ ಕಂಪನಿಗಳ ಮೂರು ಮೊಬೈಲ್ ಫೋನ್‌ಗಳು ಹಾಗೂ ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜೈಲು ಸೂಪರಿಂಡೆಂಟ್ ಬಿ.ಆರ್. ಅದಾನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಾಹಿತಿ ಪ್ರಕಾರ, ಜೈಲಿನ ಕೊಠಡಿ ಸಂಖ್ಯೆ 10, 13 ಹಾಗೂ 16 ರಲ್ಲಿ ಈ ಮೊಬೈಲ್‌ಗಳು ಪತ್ತೆಯಾಗಿವೆ. ಮೇ 12 ರಂದು ರಾತ್ರಿ ಸುಮಾರು 7.45ರ ವೇಳೆಗೆ ಜೈಲು ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಮೊಬೈಲ್ ಹಾಗೂ ಸಿಮ್ ಕಾರ್ಡ್‌ಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ. ಕಟ್ಟುನಿಟ್ಟಿನ ಭದ್ರತೆ ಇರುವ ಜೈಲಿನೊಳಗೆ ಈ ವಸ್ತುಗಳು ಹೇಗೆ ತಲುಪಿದವು ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿದೆ.
ಕೈದಿಗಳಿಗೆ ಮೊಬೈಲ್ ಒದಗಿಸಿದವರು ಯಾರು? ಜೈಲಿನೊಳಗೆ ಅಕ್ರಮ ಚಟುವಟಿಕೆಗೆ ಸಹಕರಿಸಿದವರು ಯಾರಾದರೂ ಸಿಬ್ಬಂದಿಯೇನಾ? ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ. ಅಕ್ರಮಕ್ಕೆ ಸಹಕಾರ ನೀಡಿದವರು ಹಾಗೂ ಮೊಬೈಲ್ ಬಳಕೆ ಮಾಡಿದ ಆರೋಪಿಗಳ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದರ ನಡುವೆಯೇ ಜೈಲಿನೊಳಗಿನ ಐಷಾರಾಮಿ ಸೌಲಭ್ಯಗಳ ಕುರಿತು ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕೈದಿಗಳು ಜೈಲಿನೊಳಗೆ ಮೊಬೈಲ್, ಟಿವಿ ಹಾಗೂ ನೆಟ್ ಫ್ಲಿಕ್ಸ್ ಸೇರಿದಂತೆ ಹಲವು ಸೌಲಭ್ಯಗಳಿವೆ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ವಿಚಾರಣಾಧೀನ ಕೈದಿಗಳೇ ಚಿತ್ರೀಕರಿಸಿ ವೈರಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಡಿಯೋದಲ್ಲಿ ಕೆಲ ಕೈದಿಗಳು “ನಾಳೆ ಐಪಿಎಲ್ ಮ್ಯಾಚ್ ಇದೆ, ಈ ಸಲ ಕಪ್ ನಮ್ದೆ” ಎಂದು ಮಾತನಾಡುತ್ತಾ ಜೈಲಿನೊಳಗಿನ ಜೀವನವನ್ನು ತೋರಿಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಾರಾಗೃಹ ಇಲಾಖೆಗೆ ಭಾರೀ ಮುಜುಗರ ಉಂಟಾಗಿದೆ.
ವಿಡಿಯೋದಲ್ಲಿ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಜೈಲಿನೊಳಗಿನ ಈ ಸೌಲಭ್ಯಗಳನ್ನು ಅವರೇ ಒದಗಿಸಿದ್ದಾರೆ ಎಂದು ಕೆಲ ಕೈದಿಗಳು ಆರೋಪಿಸಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ, ಈ ಆರೋಪಗಳಿಗೆ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ.
ಅಲೋಕ್ ಕುಮಾರ್ ಅವರು ಜೈಲು ಡಿಜಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಜೈಲಿನೊಳಗಿನ ಅಕ್ರಮಗಳಿಗೆ ಕಡಿವಾಣ ಹಾಕಲು ಹಲವು ಕ್ರಮಗಳನ್ನು ಕೈಗೊಂಡಿದ್ದರು. ಈ ಹಿನ್ನೆಲೆ ಅವರನ್ನು ಗುರಿಯಾಗಿಸಿಕೊಂಡು ಕೆಲವರು ವ್ಯವಸ್ಥಿತ ಷಡ್ಯಂತ್ರ ರೂಪಿಸಿರುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಇನ್ನೊಂದೆಡೆ, ವೈರಲ್ ಆಗಿರುವ ವಿಡಿಯೋ ನಿಜವಾಗಿಯೂ ಜೈಲಿನೊಳಗೆ ಚಿತ್ರೀಕರಿಸಲಾಯಿತೇ ಅಥವಾ ಜೈಲಿನಂತೆಯೇ ಕಾಣುವ ಬೇರೆ ಸ್ಥಳದಲ್ಲಿ ಸೆಟಪ್ ಮಾಡಿ ಚಿತ್ರೀಕರಿಸಲಾಗಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಪೊಲೀಸರು ಹಾಗೂ ಕಾರಾಗೃಹ ಇಲಾಖೆ ಈ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಜೈಲಿನೊಳಗಿನ ಅಕ್ರಮ ಜಾಲದ ಕುರಿತು ಸತ್ಯ ಹೊರಬರಬೇಕಿದೆ.
















