ಐಪಿಎಲ್ ಬುಧವಾರ ನಡೆದಿದ್ದ 57ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯ ಮಳೆಯಿಂದಾಗಿ ತಡವಾಗಿ ಆರಂಭಗೊಂಡಿತು. ಆದಾಗ್ಯೂ ಪಂದ್ಯದ ಓವರ್‌ಗಳಲ್ಲಿ ಯಾವುದೇ ಕಡಿತ ಮಾಡಲಾಗಿರಲಿಲ್ಲ ಎನ್ನಲಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ಕಳಪೆ ಆರಂಭವನ್ನು ಪಡೆಯಿತು,
ಫಿನ್ ಅಲೆನ್ ಭುವನೇಶ್ವರ್ ಕುಮಾರ್ (18) ಅವರ ಎಸೆತದಲ್ಲಿ ಕ್ಯಾಚೌಟ್ ಆದರು. ಇದಾದ ಸ್ವಲ್ಪ ಸಮಯದಲ್ಲೇ ನಾಯಕ ಅಜಿಂಕ್ಯ ರಹಾನೆ (19) ಅವರನ್ನು ಜೋಶ್ ಹ್ಯಾಜಲ್‌ವುಡ್ ಔಟ್ ಮಾಡಿದರು. ನಂತರ ಅಂಗ್‌ಕ್ರಿಶ್ ರಘುವಂಶಿ ಮತ್ತು ಕ್ಯಾಮರೂನ್ ಗ್ರೀನ್ ಜೊತೆಗೂಡಿ 68 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದಾಗ್ಯೂ, ಕ್ಯಾಮರೂನ್ ಗ್ರೀನ್ ಅವರನ್ನು ರಸಿಕ್ ಸಲಾಂ ದಾರ್ 32 ರನ್‌ಗಳಿಗೆ ಔಟ್ ಮಾಡಿದರು. ಅಂತಿಮವಾಗಿ, ರಿಂಕು ಸಿಂಗ್ (49*) ಅಂಗ್‌ಕ್ರಿಶ್ (71*) ಭರ್ಜರಿ ಪ್ರದರ್ಶನ ದಿಂದಾಗಿ ಕೆಕೆಆರ್ ತಂಡ 4 ವಿಕೆಟ್ ನಷ್ಟಕ್ಕೆ 192 ರನ್‌ಗಳನ್ನು ಕಲೆಹಾಕಿತು. ಕೆಕೆಆರ್ ನೀಡಿದ್ದ 193 ರನ್‌ಗಳ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ವಿರಾಟ್ ಕೊಹ್ಲಿ ಅವರ ಶತಕದ ಸಹಾಯದಿಂದ ಕೊನೆಯ ಓವರ್‌ನಲ್ಲಿ ಗುರಿಯನ್ನು ತಲುಪಿತು. ಇದಲ್ಲದೇ ದೇವದತ್ ಪಡಿಕ್ಕಲ್ (39) ಸಹ ಉತ್ತಮ ಪ್ರದರ್ಶನ ನೀಡಿದರು. ಉಳಿದವರಲ್ಲಿ ಬೆಥೆಲ್ (15), ರಜತ್ ಪಾಟಿದಾರ್ (11), ಜಿತೇಶ್ ಶರ್ಮಾ (8*) ಮತ್ತು ಟಿಮ್ ಡೇವಿಡ್ (2) ಅಲ್ಪಮೊತ್ತದ ಕೊಡುಗೆ ನೀಡಿದರು.
ಹಾಗೂ ಕಳೆದ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಆದಾಗ್ಯೂ, ಈ ಪಂದ್ಯದಲ್ಲಿ ಅವರು ಬಲವಾಗಿ ಕಮ್ಬ್ಯಾಕ್ ಮಾಡಿದರು. ವೈಭವ್ ಅರೋರಾ ಅವರ ಎರಡನೇ ಓವರ್‌ನಲ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸುವ ಮೂಲಕ ಬಿರುಸಿನ ಇನ್ನಿಂಗ್ಸ್ ಆರಂಭಿಸಿದ ಅವರು 58 ಎಸೆತಗಳಲ್ಲಿ ತಮ್ಮ 9ನೇ ಐಪಿಎಲ್ ಮತ್ತು 10ನೇ ಟಿ20 ಶತಕವನ್ನು ಪೂರ್ಣಗೊಳಿಸಿದರು. ಈ ಪಂದ್ಯದಲ್ಲಿ ವಿರಾಟ್ 105 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರು ತಮ್ಮ 60 ಎಸೆತಗಳ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಈ ಸಮಯದಲ್ಲಿ, ವಿರಾಟ್ ಕೊಹ್ಲಿ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 14,000 ರನ್‌ಗಳನ್ನು ಪೂರ್ಣಗೊಳಿಸಿದರು ಈ ಗೆಲುವಿನೊಂದಿಗೆ, ಆರ್‌ಸಿಬಿ 12 ಪಂದ್ಯಗಳಿಂದ 16 ಅಂಕಗಳನ್ನು ಹೊಂದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ತಲುಪಿದೆ. ಗುಜರಾತ್ ಟೈಟಾನ್ಸ್ ಕೂಡ 16 ಅಂಕಗಳನ್ನು ಹೊಂದಿದೆ, ಆದರೆ ಆರ್‌ಸಿಬಿ ಉತ್ತಮ ನಿವ್ವಳ ರನ್ ದರವನ್ನು ಹೊಂದಿದೆ. ಏತನ್ಮಧ್ಯೆ, ಕೆಕೆಆರ್ 11 ಪಂದ್ಯಗಳಿಂದ 9 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ ಎನ್ನಬಹುದು.

















