ಮುಂಬೈ : ಇಂಧನ ಬಳಕೆ ಕಡಿಮೆ ಮಾಡಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಸಚಿವ ಆಶಿಶ್ ಶೆಲಾರ್ ಅವರು ಕಾರು ಬಿಟ್ಟು ರಾಯಲ್ ಎನ್‌ಫೀಲ್ಡ್ ಬುಲೆಟ್ 350ನಲ್ಲಿ ವಿಧಾನ ಭವನಕ್ಕೆ ಬಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇರಾನ್ ಹಾಗೂ ಅಮೇರಿಕ ನಡುವಿನ ಉದ್ವಿಘ್ನತೆ ಹೆಚ್ಚುತ್ತಿರುವ ಹಿನ್ನೆಲೆ ಮಧ್ಯಪ್ರಾಚ್ಯದಲ್ಲಿ ತೈಲ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಇದರಿಂದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕೆಲವು ಮಿತವ್ಯಯ ಕ್ರಮಗಳನ್ನು ಅನುಸರಿಸಲು ಕರೆ ಕೊಟ್ಟಿದ್ದರು. ಈ ಕರೆಗೆ ಇದೀಗ ಬಿಜೆಪಿ ನಾಯಕರಿಂದ ಅಭಿಯಾನ ಆರಂಭವಾಗಿದೆ.
ಮೋದಿ ಕರೆ ಬೆನ್ನಲ್ಲೇ ಇಂಧನ ಉಳಿತಾಯಕ್ಕೆ ಮಹಾರಾಷ್ಟ್ರ ಸರ್ಕಾರದ ಎಲ್ಲಾ ಸಚಿವರ ಬೆಂಗಾವಲು ವಾಹನಗಳ ಸಂಖ್ಯೆಯನ್ನು 50% ರಷ್ಟು ಕಡಿಮೆ ಮಾಡುವಂತೆ ಫಡ್ನವೀಸ್ ಹೇಳಿದ್ದರು. ಮೇ 14ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವ ಸಮಗ್ರ ಇಂಧನ ಉಳಿತಾಯ ಯೋಜನೆ ಸಿದ್ಧಪಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅವರು ತಿಳಿಸಿದ್ದರು.
ಈ ನಿರ್ದೇಶನದ ಹಿಂದಿನ ಉದ್ದೇಶ ಎಲ್ಲಾ ಇಲಾಖೆಗಳು ವಿದ್ಯುತ್ ವಾಹನ ಬಳಕೆಯನ್ನು ವಿಸ್ತರಿಸುವುದು, ಪ್ರಯಾಣ ವೆಚ್ಚವನ್ನು ಕಡಿಮೆ ಮಾಡುವುದಾಗಿದೆ. ಅಲ್ಲದೇ ಆನ್‌ಲೈನ್ ಸಭೆಗಳನ್ನು ನಡೆಸುವುದು, ಅನಗತ್ಯ ಅಂತಾರಾಷ್ಟ್ರೀಯ ಪ್ರಯಾಣವನ್ನು ರದ್ದುಗೊಳಿಸುವುದು ಅಥವಾ ಮುಂದೂಡುವುದಾಗಿದೆ. ಈ ಕ್ರಮಗಳ ಭಾಗವಾಗಿ ಅಧಿಕಾರಿಗಳು ಸ್ಥಳೀಯ ರೈಲುಗಳು ಮತ್ತು ಬಸ್‌ಗಳಂತಹ ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು. ಇದು ಸರ್ಕಾರದ ಇಂಧನ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂಬುದಾಗಿದೆ.
ಇತ್ತ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ತಮ್ಮ ಪ್ರಯಾಣಕ್ಕೆ ಹೆಲಿಕಾಪ್ಟರ್‌ಗಳ ಬದಲಿಗೆ ರೈಲುಗಳು ಮತ್ತು ಸಾರ್ವಜನಿಕ ಸಾರಿಗೆ ಬಳಸುವುದಾಗಿ ಘೋಷಿಸಿದ್ದಾರೆ. ಬಿಹಾರ್ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಚೌಧರಿ ಅವರು ಕೂಡ ತಮ್ಮ ವಾಹನ ಬಳಕೆ ಕಡಿಮೆ ಮಾಡಿದ್ದು, ಅಗತ್ಯವಿದ್ದಾಗ ಮಾತ್ರ ಪ್ರಯಾಣ ಕೈಗೊಳ್ಳುವುದಾಗಿ ಹೇಳಿದ್ದಾರೆ.

















