ಮಂಡ್ಯ : ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಕೂಡ ಮುಚ್ಚುವ ಪರಿಸ್ಥಿತಿಯಲ್ಲಿತ್ತು. ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕೂಡ ಕುಸಿದಿತ್ತು. ಹೀಗಾಗಿ ಶಾಲೆಗೆ ಬೀಗ ಬೀಳುವ ಪರಿಸ್ಥಿತಿ ಎದುರಾಗಿತ್ತು. ಆದರೆ ಬಾಲ್ಯ ರೂಪಿಸಿದ ಶಾಲೆ ಉಳಿಸಲು ಯೋಧರಂತೆ ಬಂದವರೇ ಆ ಶಾಲೆಯ ಹಳೆಯ ವಿದ್ಯಾರ್ಥಿಗಳು. ತಾವು ಓದಿದ ಶಾಲೆ ಮುಚ್ಚುವ ಹಂತದಲ್ಲಿದ್ದುದ್ದನ್ನು ಕಂಡು, ಸರ್ಕಾರಿ ಶಾಲೆಗಳು ಉಳಿಯಬೇಕು ಎಂದು, ಹಳೆಯ ವಿದ್ಯಾರ್ಥಿಗಳ ತಂಡ ಪಣತೊಟ್ಟು ಸುಮಾರು 600 ಜನ ಸೇರಿ ಸ್ವಂತ ಹಣದಿಂದಲೇ ಪಾಳುಬಿದ್ದಂತಿದ್ದ ಕಟ್ಟಡಕ್ಕೆ ಹೊಸ ಬಣ್ಣದ ಮೆರಗು ಕೊಟ್ಟು, ಸರ್ಕಾರಿ ಪ್ರೌಢಶಾಲೆಯನ್ನು ಅಭಿವೃದ್ಧಿ ಮಾಡಿದ್ದಾರೆ ಎನ್ನಲಾಗಿದೆ.
ಆದರೆ ವರ್ಷಗಳು ಕಳೆದಂತೆ ಖಾಸಗಿ ಶಾಲೆಗಳ ವ್ಯಾಮೋಹದಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಾತಿ ಮಾಡಿದ ಪರಿಣಾಮ ಪ್ರಸ್ತುತ ವರ್ಷ ಕೇವಲ 37 ವಿದ್ಯಾರ್ಥಿಗಳು ಇರುವುದು ಬೇಸರದ ಸಂಗತಿಯಾಗಿತ್ತು. ಸರ್ಕಾರಿ ಶಾಲೆಯಲ್ಲಿ ನುರಿತ ಶಿಕ್ಷಕರ ತಂಡ, ವಿಶಾಲವಾದ ಕ್ರೀಡಾಂಗಣ, ಕೊಠಡಿಗಳು, ಕಂಪ್ಯೂಟರ್ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯ ಇದ್ದರೂ ದಾಖಲಾತಿ ಕಡಿಮೆಯಾಗಿತ್ತು. ಇದನ್ನು ಮನಗಂಡ ಹಳೆಯ ವಿದ್ಯಾರ್ಥಿಗಳು ಶಾಲೆಯ ಕಾಯಕಲ್ಪಕ್ಕೆ ಮುಂದಾಗಿದ್ದಾರೆ. ಇಡೀ ಶಾಲೆಯ ಗೋಡೆಗಳನ್ನು ಸ್ವಚ್ಛಗೊಳಿಸಿ, ಪ್ಲ್ಯಾಸ್ಟರಿಂಗ್, ಬಣ್ಣ ಬಳಿಯುವುದು, ಕಾಂಪೌಂಡ್ ದುರಸ್ತಿ, ಗೇಟ್ ಅಳವಡಿಕೆ, ಫ್ಲಾಟ್ ಫಾರಂ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ಸಂಪರ್ಕ, ಹೈಟೆಕ್ ಕಂಪ್ಯೂಟರ್ ಕೊಠಡಿಗಳನ್ನು ಸಿದ್ಧಪಡಿಸಿದ್ದಾರೆ. ಇಷ್ಟೆಲ್ಲ ಕೆಲಸಗಳನ್ನು ಸ್ವತಃ ಹಳೆಯ ವಿದ್ಯಾರ್ಥಿಗಳೇ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ನಮ್ಮ ಶಾಲೆ, ನನ್ನ ಹೆಮ್ಮೆ ಎಂಬ ಭಾವನೆಯೊಂದಿಗೆ ವಿದ್ಯಾರ್ಥಿಗಳು ಕೈಗೊಂಡಿರುವ ಈ ‘ಶಾಲೆ ಕಾಯಕಲ್ಪ’ ಕಾರ್ಯವು ಸರ್ಕಾರಿ ಶಾಲೆಗಳ ಉಳಿವಿಗೆ ಮತ್ತು ಸುಂದರ ಕಲಿಕಾ ಪರಿಸರ ನಿರ್ಮಾಣಕ್ಕೆ ಸಾಕ್ಷಿಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿಯೂ ಬೋಧನೆ ಮಾಡುವಂತೆ ಶಿಕ್ಷಕರನ್ನು ಮನವೊಲಿಸಲಾಗಿದೆ. ಹಳೆಯ ವಿದ್ಯಾರ್ಥಿಗಳು, ಶಾಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದು, ಇದರಿಂದ ಶಾಲೆಗೆ ಒಂದು ಹೊಸ ರೂಪ ಬಂದಿದೆ. ಮುಂದೆಯೂ ಇವರು ಶಾಲೆಗೆ ಹಲವು ರೀತಿಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಘ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಶಾಲೆಗೆ ದಾಖಲಾತಿ ಹೆಚ್ಚಾಗಬೇಕು, ಗುಣಾತ್ಮಕ ಶಿಕ್ಷಣ ಸಿಗಬೇಕು ಎಂಬುದೇ ನಮ್ಮ ಮೂಲ ಉದ್ದೇಶ ಎಂದು ಹಳೆಯ ವಿದ್ಯಾರ್ಥಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

















