ಮನೆ ಸುದ್ದಿ ಜಾಲ ಹಿಂಬದಿ ಚಕ್ರ ತುಂಡಾಗಿ ರಸ್ತೆಯಲ್ಲಿ ಮಾವು ತುಂಬಿದ ಲಾರಿ ಪಲ್ಟಿ : ಬಾಗಲಕೋಟೆ

ಹಿಂಬದಿ ಚಕ್ರ ತುಂಡಾಗಿ ರಸ್ತೆಯಲ್ಲಿ ಮಾವು ತುಂಬಿದ ಲಾರಿ ಪಲ್ಟಿ : ಬಾಗಲಕೋಟೆ

0

ಬಾಗಲಕೋಟೆ (ಮೇ 14): ಜಿಲ್ಲೆಯ ಇಳಕಲ್ ತಾಲೂಕಿನ ಗೊರಬಾಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಾವು ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಲಾರಿಯ ಹಿಂಬದಿಯ ಚಕ್ರಗಳು ವಾಹನದಿಂದ ಪ್ರತ್ಯೇಕವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮಾವಿನ ಹಣ್ಣುಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎನ್ನಲಾಗಿದೆ.

ಈ ಲಾರಿಯು ಮಾವಿನ ಹಣ್ಣನ್ನು ತುಂಬಿಕೊಂಡು ಕಲಬುರ್ಗಿ ಕಡೆಗೆ ವೇಗವಾಗಿ ಹೊರಟಿತ್ತು. ಇಳಕಲ್ ತಾಲೂಕಿನ ಗೊರಬಾಳ ಕ್ರಾಸ್ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಯ ಮಧ್ಯೆ ಇದ್ದ ಡಿವೈಡರ್ ಮೇಲೆ ಹತ್ತಿ ಪಲ್ಟಿಯಾಗಿದೆ. ಲಾರಿ ಅತಿ ವೇಗದಲ್ಲಿದ್ದ ಕಾರಣ ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಹಿಂಬದಿಯ ಪಾಟಾ ಕಟ್ ಆಗಿ, ವಾಹನದಿಂದ ಚಕ್ರಗಳೇ ಕಿತ್ತು ಬಂದಿವೆ. ಅಪಘಾತ ಸಂಭವಿಸಿದ ತಕ್ಷಣ ಲಾರಿಯಲ್ಲಿದ್ದ ಮಾವಿನ ಹಣ್ಣಿನ ಬಾಕ್ಸ್‌ಗಳು ಕೆಳಗೆ ಬಿದ್ದಿವೆ. ಇದರಿಂದಾಗಿ ನೂರಾರು ಕೆಜಿ ಮಾವಿನ ಹಣ್ಣುಗಳು ರಸ್ತೆಯ ಮೇಲೆ ಹರಡಿಕೊಂಡಿದ್ದು, ಜಖಂಗೊಂಡಿವೆ. ಆದರೆ ಘಟನೆಯಲ್ಲಿ ಲಾರಿ ಕೂಡ ಸಂಪೂರ್ಣ ಜಖಂಗೊಂಡಿದ್ದು, ಮಾಲೀಕರಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ. ಅದೃಷ್ಟವಶಾತ್ ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಪಲ್ಟಿಯಾಗಿ ಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ನಂತರ ಸ್ಥಳಕ್ಕೆ ಆಗಮಿಸಿದವರು ರಸ್ತೆಯ ಮೇಲೆ ಬಿದ್ದಿದ್ದ ಮಾವಿನ ಹಣ್ಣುಗಳನ್ನು ಮತ್ತು ಬಾಕ್ಸ್‌ಗಳನ್ನು ಪಕ್ಕಕ್ಕೆ ಸರಿಸಿದರು. ಉಳಿದ ಹಣ್ಣುಗಳನ್ನು ಮತ್ತೊಂದು ಲಾರಿಗೆ ತುಂಬಿಸಿ ಸಾಗಿಸುವ ವ್ಯವಸ್ಥೆ ಮಾಡಲಾಯಿತು ಎಂದು ತಿಳಿದುಬಂದಿದೆ.