ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಆರೋಪದಲ್ಲಿ ಏಳು ವರ್ಷಗಳ ಶಿಕ್ಷೆಗೆ ಗುರಿಯಾಗಿರುವ, ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ಮಂಜೂರು ಮಾಡುವಂತೆ ಕೋರಿ ಪೊಲೀಸ್ ಅಧಿಕಾರಿ ಚನ್ನಕೇಶವ ಟಿಂಗರೀಕರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮೇ 26ಕ್ಕೆ ನಿಗದಿಪಡಿಸಿದ್ದು ಶಿಕ್ಷೆ ಅಮಾನತ್ತು ಕೋರಿ ಟಿಂಗರೀಕರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್. ಪಿ. ಸಂದೇಶ್ ಅವರಿದ್ದ ನ್ಯಾಯಪೀಠ, ಅರ್ಜಿದಾರರ ಶಿಕ್ಷೆ ಅಮಾನತ್ತಿನಲ್ಲಿಡಬೇಕಾದರೆ, ಸುಧೀರ್ಘ ವಿಚಾರಣೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿದ್ದು, ವಿಚಾರಣೆ ಮುಂದೂಡುತ್ತಿರುವುದಾಗಿ ತಿಳಿಸಿದೆ ಎನ್ನಬಹುದು.
ಈ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಪೊಲೀಸ್ ಅಧಿಕಾರಿಯಾಗಿದ್ದು, ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪವಿದೆ. ಆದರೆ, ಅವರ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷ್ಯಾಧರಗಳಿಲ್ಲ. ಅಲ್ಲದೆ, ಟಿಂಗರೀಕರ್ ಅವರು 90 ದಿನಗಳ ಕಾಲ ಮಾತ್ರ ತನಿಖಾಧಿಕಾರಿಯಾಗಿದ್ದರು. ಸಿಸಿಟಿವಿ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ನಡೆಸಿದ್ದರು. ಅವರ ವಿರುದ್ಧ ಕೇವಲ ಮೌಖಿಕ ಸಾಕ್ಷ್ಯಗಳು ಮಾತ್ರ ಇವೆ. ಆದ್ದರಿಂದ ಶಿಕ್ಷೆಯನ್ನು ಅಮಾನತ್ತಿನಲ್ಲಿಡಬೇಕು ಎಂದು ಕೋರಿದರು. ಇದಕ್ಕೆ ಆಕ್ಷೇಪಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್, ಎಸ್.ವಿ. ರಾಜು, ಆರೋಪಿಗೆ ಏಳು ವರ್ಷ ಶಿಕ್ಷೆ ವಿಧಿಸಲಾಗಿದೆ. ಆದರೆ, ಇದೀಗ ಕೇವಲ 73 ದಿನಗಳ ಕಾಲ ಮಾತ್ರ ಜೈಲಿನಲ್ಲಿದ್ದಾರೆ. ಅಲ್ಲದೆ, ರಾಜ್ಯದ ಪೊಲೀಸರು ನ್ಯಾಯದಾನ ಮಾಡುವ ಕೆಲಸ ಮಾಡಬೇಕು. ಆದರೆ, ಅರ್ಜಿದಾರ ಅಧಿಕಾರಿ ಆರೋಪಿಗಳ ಜತೆ ಕೈಜೋಡಿಸಿದ್ದಾರೆ.
ಹಾಗೂ ನೈಜ ಸಾಕ್ಷ್ಯಗಳನ್ನು ಮರೆಮಾಚಿ ಬದಲಿ ಸಾಕ್ಷ್ಯಗಳನ್ನು ಸಂಗ್ರಹಿಸಿ ತಪ್ಪೆಸಗಿದ್ದಾರೆ. ಘಟನೆ ಸಂಬಂಧ ಪ್ರಮುಖ ಆರೋಪಗಳೊಂದಿಗೆ ಕೈಜೋಡಿಸಿದ್ದಾರೆ. ಆದ್ದರಿಂದ ಅವರಿಗೆ ವಿಧಿಸಿರುವ ಶಿಕ್ಷೆ ಸರಿಯಾಗಿದ್ದು, ಯಾವುದೇ ರೀತಿಯ ಪರಿಹಾರವನ್ನು ನ್ಯಾಯಾಲಯ ನೀಡಬಾರದು ಎಂದು ಪೀಠಕ್ಕೆ ತಿಳಿಸಿದರು. ವಾದ ಆಲಿಸಿದ ನ್ಯಾಯಪೀಠ, ತನಿಖಾಧಿಕಾರಿಯಾಗಿದ್ದ ಅರ್ಜಿದಾರರ ನಡೆಸಿರುವ ತನಿಖೆಯಲ್ಲಿ ಗಂಭೀರ ಲೋಪವೆಸಗಿರುವುದು ಗೊತ್ತಾಗಿದ್ದು, ಶಿಕ್ಷೆಯನ್ನು ಅಮಾನತ್ತಿನಲ್ಲಿಡಬೇಕಾದರೆ ವಿಸ್ತೃತವಾದ ವಿಚಾರಣೆ ನಡೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು ಎಂದು ತಿಳಿದುಬಂದಿದೆ.

















