ಮನೆ ಸುದ್ದಿ ಜಾಲ 4.50 ಲಕ್ಷ ಸಾಲಕ್ಕೆ 6.14 ಎಕರೆ ಜಮೀನು ಹರಾಜು ಮಾಡಿದ ಬ್ಯಾಂಕ್? ರೈತ ಸಂಘದಿಂದ ಗಂಭೀರ...

4.50 ಲಕ್ಷ ಸಾಲಕ್ಕೆ 6.14 ಎಕರೆ ಜಮೀನು ಹರಾಜು ಮಾಡಿದ ಬ್ಯಾಂಕ್? ರೈತ ಸಂಘದಿಂದ ಗಂಭೀರ ಆರೋಪ

0

ತುರುವೇಕೆರೆ: ಕೇವಲ 4.50 ಲಕ್ಷ ರೂಪಾಯಿ ಸಾಲಕ್ಕಾಗಿ 6.14 ಎಕರೆ ಮೌಲ್ಯಯುತ ಜಮೀನನ್ನು ಹರಾಜು ಮಾಡಲಾಗಿದೆ ಎಂದು ಕರ್ಣಾಟಕ ಬ್ಯಾಂಕ್ ವಿರುದ್ಧ ತಾಲೂಕು ರೈತ ಸಂಘ ಗಂಭೀರ ಆರೋಪ ಮಾಡಿದೆ. ರೈತರ ಜಮೀನನ್ನು ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಸೇರಿ ಕಡಿಮೆ ಬೆಲೆಗೆ ಹರಾಜು ಮಾಡಲಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ತಾಳಕೆರೆ ಗ್ರಾಮದ ಈರಯ್ಯ ಹಾಗೂ ಕೃಷ್ಣಪ್ಪ ಕುಟುಂಬದವರು ಸರ್ವೆ ನಂ 273ರಲ್ಲಿ ಇರುವ 6.14 ಎಕರೆ ಜಮೀನಿನ ಮೇಲೆ ಸುಮಾರು 4.50 ಲಕ್ಷ ರೂಪಾಯಿ ಸಾಲ ಪಡೆದಿದ್ದರು ಎಂದು ತಿಳಿಸಿದರು. ಆದರೆ ನಂತರ ಬ್ಯಾಂಕ್ ಬಡ್ಡಿ, ಸುಸ್ತಿ ಬಡ್ಡಿ ಸೇರಿದಂತೆ ಒಟ್ಟು 34.80 ಲಕ್ಷ ರೂಪಾಯಿ ಸಾಲ ಬಾಕಿ ಇದೆ ಎಂದು ತೋರಿಸಿ ಡಿಕ್ರಿ ಮಾಡಿಸಲಾಗಿದೆ ಎಂದು ಆರೋಪಿಸಿದರು.

ಇದೇ ಪ್ರಕರಣದಲ್ಲಿ 2024ರಲ್ಲಿ ರೈತರಿಗೆ ಸರಿಯಾದ ಮಾಹಿತಿ ನೀಡದೇ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಬ್ಯಾಂಕ್ ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿಕೊಂಡು ರೈತರ ಜಮೀನನ್ನು ಕೆಲವೇ ಲಕ್ಷ ರೂಪಾಯಿಗಳಿಗೆ ಪಡೆದುಕೊಳ್ಳುವ ಸಂಚು ರೂಪಿಸಿದ್ದಾರೆ ಎಂದು ರೈತ ಸಂಘದ ಮುಖಂಡರು ದೂರಿದ್ದಾರೆ.

ರೈತ ಸಂಘದ ಪ್ರಕಾರ, ಜಮೀನಿನ ನಿಜವಾದ ಮೌಲ್ಯ ಕೋಟ್ಯಂತರ ರೂಪಾಯಿಗಳಾಗಿದ್ದು, ರೈತರಿಗೆ ಗೊತ್ತಿಲ್ಲದ ರೀತಿಯಲ್ಲಿ ಹರಾಜು ನಡೆಸಲಾಗಿದೆ. ಬ್ಯಾಂಕ್ ಮತ್ತು ರಿಯಲ್ ಎಸ್ಟೇಟ್ ನವರ ನಡುವೆ ಹೊಂದಾಣಿಕೆ ನಡೆದಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ. ರೈತರ ಭೂಮಿಯನ್ನು ಕಬಳಿಸುವ ಉದ್ದೇಶದಿಂದಲೇ ಈ ಹರಾಜು ಪ್ರಕ್ರಿಯೆ ನಡೆದಿದೆ ಎಂದು ಶ್ರೀನಿವಾಸ ಗೌಡ ಆರೋಪಿಸಿದ್ದಾರೆ.

ಈ ಹಿಂದೆ ಕೂಡ ಇದೇ ವಿಚಾರವಾಗಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆ ವೇಳೆ ಕರ್ನಾಟಕ ಬ್ಯಾಂಕ್ ಮುಖ್ಯಸ್ಥರು ಹಾಗೂ ರಾಜ್ಯ ರೈತ ಸಂಘದ ಮುಖಂಡರ ನಡುವೆ ಮಾತುಕತೆ ನಡೆದಿತ್ತು. ರೈತರು 5 ಲಕ್ಷ ರೂಪಾಯಿ ಡಿಡಿ ಮೂಲಕ ಹಣ ಪಾವತಿಸಿದರೆ ಜಮೀನನ್ನು ಮತ್ತೆ ರೈತನ ಹೆಸರಿಗೆ ವರ್ಗಾವಣೆ ಮಾಡಲಾಗುವುದು ಎಂದು ಒಡಂಬಡಿಕೆ ಆಗಿತ್ತು ಎಂದು ತಿಳಿಸಿದರು.

ಆದರೆ ಸುಮಾರು ಎರಡು ವರ್ಷಗಳಿಂದ ಬ್ಯಾಂಕ್ ಸಿಬ್ಬಂದಿ ವಿವಿಧ ಕಾರಣಗಳನ್ನು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ರೈತ ಸಂಘ ಆರೋಪಿಸಿದೆ. ಇತ್ತೀಚೆಗೆ ಹರಾಜಿನಲ್ಲಿ ಜಮೀನು ಪಡೆದಿದ್ದಾರೆ ಎನ್ನಲಾದ ಸುಬ್ರಮಣಿ ಎಂಬ ರಿಯಲ್ ಎಸ್ಟೇಟ್ ಉದ್ಯಮಿಗೆ ಜಮೀನು ಹಸ್ತಾಂತರ ಮಾಡಲು ಬ್ಯಾಂಕ್ ಸಿಬ್ಬಂದಿ ಪೊಲೀಸರನ್ನು ಕರೆದುಕೊಂಡು ಜಮೀನಿನ ಬಳಿ ತೆರಳಿದ್ದರು ಎಂದು ಹೇಳಿದರು.

ಈ ವಿಷಯ ತಿಳಿದ ತಕ್ಷಣ ರಾಜ್ಯ ರೈತ ಸಂಘದ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಬ್ಯಾಂಕ್ ನ ರೈತ ವಿರೋಧಿ ಕ್ರಮವನ್ನು ಖಂಡಿಸಿದರು. ಬಳಿಕ ಬ್ಯಾಂಕ್ ಸಿಬ್ಬಂದಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ವಾಪಸ್ಸು ಕಳುಹಿಸಲಾಯಿತು ಎಂದು ಮಾಹಿತಿ ನೀಡಿದರು.

ದಲಿತ ಕುಟುಂಬಕ್ಕೆ ಸೇರಿದ ರೈತರು ಇದೇ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಭೂಮಿ ಕಳೆದುಕೊಂಡರೆ ಕುಟುಂಬ ಆತ್ಮಹತ್ಯೆ ಮಾಡುವಂತಹ ಪರಿಸ್ಥಿತಿ ಎದುರಾಗಬಹುದು ಎಂದು ರೈತ ಸಂಘ ಆತಂಕ ವ್ಯಕ್ತಪಡಿಸಿದೆ.

ಕೂಡಲೇ ಬ್ಯಾಂಕ್ ಅಧಿಕಾರಿಗಳು ನೀಡಿದ ಮಾತಿನಂತೆ ರೈತನಿಂದ ಹಣ ಪಡೆದು ಜಮೀನನ್ನು ಮತ್ತೆ ರೈತನ ಹೆಸರಿಗೆ ನೋಂದಣಿ ಮಾಡಬೇಕು. ಇಲ್ಲವಾದರೆ ಬ್ಯಾಂಕ್ ಎದುರು ಅಹೋರಾತ್ರಿ ಚಳುವಳಿ ನಡೆಸಲಾಗುವುದು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ ಗೌಡ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಸಿದ್ದರಾಮಣ್ಣ, ಗೋವಿಂದರಾಜು, ದೇವರಾಜು, ಚೆಂಡೂರು ರಹಮತ್, ಚರಣ್ ರಾಜ್, ಬ್ಯಾಟಪ್ಪ, ಪರಮೇಶ್ವರಯ್ಯ, ಶಶಿಕುಮಾರ್, ನಾಗರಾಜು, ಮಹಾಲಿಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.