ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆ ಕುರಿತು ನಡೆಯುತ್ತಿರುವ ರಾಜಕೀಯ ಚರ್ಚೆ ಮತ್ತು ರೈತರ ವಿರೋಧದ ನಡುವೆಯೂ ಯೋಜನೆಯನ್ನು ಕೈಬಿಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟ ಸಂದೇಶ ನೀಡಿದ್ದಾರೆ. ರೈತರು ತಮಗೆ ವಿರೋಧ ವ್ಯಕ್ತಪಡಿಸಿದರೂ, ಬಟ್ಟೆ ಹರಿದರೂ ಸಹ ಅಭಿವೃದ್ಧಿ ಕೆಲಸದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಬಿಡದಿ ಟೌನ್ಶಿಪ್ ಯೋಜನೆಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ಇದು ಹೊಸ ಯೋಜನೆ ಅಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಈ ಯೋಜನೆ ರೂಪುಗೊಂಡಿತ್ತು. ಈಗ ನಾವು ಅದನ್ನೇ ಮುಂದುವರಿಸುತ್ತಿದ್ದೇವೆ” ಎಂದು ಹೇಳಿದರು.
ಯೋಜನೆ ಅಗತ್ಯವಿಲ್ಲ ಎಂದು ಆಗಲೇ ನಿರ್ಧಾರ ಮಾಡಿದ್ದರೆ, ಆ ಸಮಯದಲ್ಲೇ ಭೂಮಿಯನ್ನು ಡಿನೋಟಿಫೈ ಮಾಡಬಹುದಿತ್ತು. ಆದರೆ ಆ ಕ್ರಮ ಕೈಗೊಂಡಿಲ್ಲ. ಇದೀಗ ರಾಜಕೀಯ ಉದ್ದೇಶದಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ಅವರು ಪರೋಕ್ಷವಾಗಿ ಟೀಕಿಸಿದರು.
ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರ ಆತಂಕ ಮತ್ತು ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ತಾವೇ ನೇರವಾಗಿ ರೈತರ ಮುಂದೆ ಹೋಗಿ ಯೋಜನೆಯ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದರು. ರೈತರೊಂದಿಗೆ ಮಾತುಕತೆ ನಡೆಸಿ ಯೋಜನೆಯ ಅಗತ್ಯ ಮತ್ತು ಭವಿಷ್ಯದ ಪ್ರಯೋಜನಗಳನ್ನು ವಿವರಿಸುವುದಾಗಿ ತಿಳಿಸಿದ್ದಾರೆ.
“ರೈತರು ನನಗೆ ಎರಡೇಟು ಹೊಡೆಯಬಹುದು. ಬಟ್ಟೆ ಹರಿಯಬಹುದು. ಕಲ್ಲು ತೂರಬಹುದು. ಧಿಕ್ಕಾರ ಕೂಗಬಹುದು. ಆದರೆ ನಾನು ಹೆದರಲ್ಲ. ಜನರ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮುಂದುವರೆಯುತ್ತೇನೆ” ಎಂದು ಡಿಕೆ ಶಿವಕುಮಾರ್ ಹೇಳಿದರು.
ಅಭಿವೃದ್ಧಿ ಯೋಜನೆಗಳ ಬಗ್ಗೆ ಆರಂಭದಲ್ಲಿ ವಿರೋಧ ವ್ಯಕ್ತವಾಗುವುದು ಸಹಜ. ಆದರೆ ಮುಂದಿನ ದಿನಗಳಲ್ಲಿ ಇದೇ ಯೋಜನೆ ಪ್ರದೇಶದ ಜನರಿಗೆ ಲಾಭ ತರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ 20 ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡೇ ಬಿಡದಿ ಟೌನ್ಶಿಪ್ ಯೋಜನೆ ರೂಪಿಸಲಾಗಿದೆ ಎಂದು ಡಿಸಿಎಂ ಹೇಳಿದರು. ಬೆಂಗಳೂರು ದಕ್ಷಿಣ ಭಾಗದಲ್ಲಿ ವೇಗವಾಗಿ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ನಗರ ಯೋಜನೆಗಳು ಅಗತ್ಯವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
“ಇಂದು ವಿರೋಧ ಮಾಡುವ ರೈತರ ಮಕ್ಕಳೇ ಮುಂದಿನ ದಿನಗಳಲ್ಲಿ ಈ ಯೋಜನೆಯ ಪ್ರಯೋಜನ ಪಡೆಯುತ್ತಾರೆ. ಭವಿಷ್ಯದ ನಗರಾಭಿವೃದ್ಧಿ ಮತ್ತು ಮೂಲಸೌಕರ್ಯ ವೃದ್ಧಿಗಾಗಿ ಬಿಡದಿ ಟೌನ್ಶಿಪ್ ಬಹಳ ಮುಖ್ಯ” ಎಂದು ಹೇಳಿದರು.
ಭೂಮಿಯನ್ನು ಡಿನೋಟಿಫೈ ಮಾಡುವ ಯಾವುದೇ ಯೋಚನೆ ಸರ್ಕಾರಕ್ಕಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ “ಭೂಮಿ ಗ್ಯಾರಂಟಿ” ಯೋಜನೆ ಕುರಿತು ಸಹ ಡಿಕೆ ಶಿವಕುಮಾರ್ ಮಾಹಿತಿ ನೀಡಿದರು. ಜನರ ಆಸ್ತಿ ದಾಖಲೆ ಸಮಸ್ಯೆ ನಿವಾರಣೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಆಸ್ತಿಗಳಿಗೆ ಸರಿಯಾದ ದಾಖಲೆ ಒದಗಿಸುವ ಉದ್ದೇಶದಿಂದ “ಭೂಮಿ ಗ್ಯಾರಂಟಿ” ಯೋಜನೆ ಜಾರಿಗೆ ತರಲಾಗಿದೆ. ಜನರ ಮನೆ ಬಾಗಿಲಿಗೆ ಇ-ಖಾತೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಹಾಗೆಯೇ “ಬಿ ಖಾತೆ” ಇರುವ ಆಸ್ತಿಗಳನ್ನು “ಎ ಖಾತೆ”ಗೆ ಪರಿವರ್ತನೆ ಮಾಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಇದರಿಂದ ಸಾಮಾನ್ಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

















