ಮನೆ ಸುದ್ದಿ ಜಾಲ ಪ್ರೀತಿಸಿದ ಹುಡುಗನಿಗೋಸ್ಕರ ಕ್ರಿಶ್ಚಿಯನ್ ಮತದಿಂದ ಹಿಂದೂ ಧರ್ಮಕ್ಕೆ ಯುವತಿ ಘರ್‌ವಾಪ್ಸಿ..!

ಪ್ರೀತಿಸಿದ ಹುಡುಗನಿಗೋಸ್ಕರ ಕ್ರಿಶ್ಚಿಯನ್ ಮತದಿಂದ ಹಿಂದೂ ಧರ್ಮಕ್ಕೆ ಯುವತಿ ಘರ್‌ವಾಪ್ಸಿ..!

0

ಶಿವಮೊಗ್ಗ : ಕ್ರಿಶ್ಚಿಯನ್ ಮತದ ಯುವತಿಯೊಬ್ಬಳು ಪ್ರೀತಿಸಿದ ಯುವಕನಿಗಾಗಿ ವಿಹೆಚ್‌ಪಿ ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ಮತ್ತೆ ವಾಪಸ್ ಬಂದಿದ್ದಾರೆ. ಹಿಂದೂ ಧರ್ಮಕ್ಕೆ ಸೇರಿದ್ದ ಹನುಮಂತನಗರದ ಸಿಗೇಬಾಗಿಯ ಕುಟುಂಬವೊಂದು ಈ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿತ್ತು. ಆದರೆ, ಯುವತಿ ಭದ್ರಾವತಿ ತಾಲೂಕಿನ ಅಂತರಗಂಗೆಯ ಎಂ.ಶಿವಕುಮಾರ್ ಎಂಬುವವರನ್ನು ಪ್ರೀತಿಸುತ್ತಿದ್ದರು. ಈ ಕಾರಣ ಹಿಂದೂ ಧರ್ಮದ ಸಂಪ್ರದಾಯದಂತೆ ಮದುವೆಯಾಗಲು ಅಪೇಕ್ಷೆ ಪಟ್ಟು ಯುವತಿ ವಾಪಾಸ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಯುವತಿಯನ್ನು ಪುನಃ ಹಿಂದೂ ಧರ್ಮಕ್ಕೆ ಕರೆ ತರುವಲ್ಲಿ ಭದ್ರಾವತಿಯ ವಿಶ್ವ ಹಿಂದೂ ಪರಿಷತ್ ಪ್ರಮುಖ ಪಾತ್ರ ವಹಿಸಿದೆ.

ಇಲ್ಲಿನ ಜನ್ನಾಪುರ ಮಹಾಗಣಪತಿ ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ ಕೃಷ್ಣಮೂರ್ತಿ ಸೋಮಯಾಜಿ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯದಲ್ಲಿ ಯುವತಿಯ ಮತಾಂತರ ಆಗಿದೆ. ಮೇ 24ರಂದು ವಿಶ್ವ ಹಿಂದೂ ಪರಿಷತ್ ಆಯೋಜಿಸಿರುವ ಸಾಮೂಹಿಕ ವಿವಾಹದಲ್ಲಿ ಹಿಂದೂ ಸಂಪ್ರಾದಾಯದಂತೆ ಯುವತಿಯ ವಿವಾಹ ನೆರವೇರಲಿದೆ. ಮತಾಂತರಗೊಂಡ ಬೆನ್ನಲ್ಲೇ ಆರೋಗ್ಯಕರ ಪ್ರಿಯಾ ಎನ್ನುವ ಅವರ ಹೆಸರನ್ನು ಪ್ರಿಯಾ ಎಂದು ಬದಲಾಯಿಸಲಾಗಿದೆ.

ಪ್ರಿಯಾ ಹೇಳಿದ್ದೇನು? – ಮತಾಂತರಗೊಂಡ ಬೆನ್ನಲ್ಲೇ ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿರುವ ಪ್ರಿಯಾ, “ನಾವು ರೋಮನ್ ಕ್ಯಾಥೋಲಿಕ್ ಸಮುದಾಯಕ್ಕೆ ಸೇರಿದವರು. ನಾನು ಮತ್ತು ಶಿವಕುಮಾರ್ 5 ವರ್ಷದಿಂದ ಸ್ನೇಹಿತರಾಗಿದ್ದೆವು. 2 ವರ್ಷದಿಂದ ಪ್ರೀತಿಸುತ್ತಿದ್ದೆವು. ಹಾಗಾಗಿ ಮದುವೆಯಾಗಲು ಬೇರೆ-ಬೇರೆ ಧರ್ಮ ಇದ್ದರೆ ಸರಿಯಾಗಲ್ಲ. ಭವಿಷ್ಯದಲ್ಲಿ ತೊಂದರೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಮತಾಂತರದ ನಿರ್ಧಾರ ತೆಗೆದುಕೊಂಡಿದ್ದೇನೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದರೆ ತೊಂದರೆಯಾಗಲ್ಲ.

ನಿನ್ನೆ ದೇವಸ್ಥಾನದಲ್ಲಿ ಪೂಜೆ ಕಾರ್ಯ ಎಲ್ಲಾ ಮುಗಿಯಿತು. ಎಲ್ಲರೂ ಚೆನ್ನಾಗಿ ನೋಡಿಕೊಂಡಿದ್ದಾರೆ. ನಾನು ಇಷ್ಟಪಟ್ಟು ಈ ಧರ್ಮಕ್ಕೆ ಬಂದಿದ್ದೇನೆ. ಇಲ್ಲಿ ಎಲ್ಲವೂ ನನಗೆ ಹೊಸತು ಎಂದರು. ಈ ಕುರಿತು ಆಕೆಯ ಪ್ರಿಯಕರ ಶಿವಕುಮಾರ್ ಮಾತನಾಡಿದ್ದು, ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಮತಾಂತರ ಆಗಿದೆ. ಪ್ರಿಯಾ ನನಗೋಸ್ಕರ ಹಿಂದೂ ಧರ್ಮಕ್ಕೆ ಬಂದಿದ್ದಾಳೆ. ಬಹಳ ಖುಷಿಯಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.