ನವದೆಹಲಿ : ʻಆಪರೇಷನ್ ರೇಜ್ಪಿಲ್ʼ ವಿಶೇಷ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯ ನಿಯಂತ್ರಣ ಘಟಕವು ಸುಮಾರು 182 ಕೋಟಿ ರೂ. ಮೌಲ್ಯದ ʻಜಿಹಾದಿ ಡ್ರಗ್ʼ ಅನ್ನು ವಶಪಡಿಸಿಕೊಂಡಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ತಿಳಿಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ʻಡ್ರಗ್ ಮುಕ್ತ ಭಾರತʼ ನಿರ್ಮಾಣ ಮಾಡಲು ಸಂಕಲ್ಪ ಮಾಡಿದೆ ಎಂದು ಹೇಳಿದ್ದಾರೆ.
ಆಪರೇಷನ್ ರೇಜ್ಪಿಲ್ ಮೂಲಕ ನಮ್ಮ ಏಜೆನ್ಸಿಗಳು 182 ಕೋಟಿ ರೂ. ಮೌಲ್ಯದ ʻಜಿಹಾದಿ ಡ್ರಗ್ʼ ಎಂದು ಕರೆಯುವ ಕ್ಯಾಪ್ಟಗನ್ ಸರನ್ನು ಮೊದಲಬಾರಿಗೆ ವಶಪಡಿಸಿಕೊಂಡಿವೆ. ಈ ಮಾಹಿತಿ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. ಮಧ್ಯಪ್ರಾಚ್ಯಕ್ಕೆ ಸಾಗಿಸಲು ಉದ್ದೇಶಿಸಲಾಗಿದ್ದ ಮಾದಕ ವಸ್ತುಗಳನ್ನು ಭೇದಿಸುವುದು ಮತ್ತು ವಿದೇಶಿ ಪ್ರಜೆಯನ್ನ ಬಂಧಿಸಿರುವುದು ಮಾದಕವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣುತೆಗೆ ನಮ್ಮ ಬದ್ಧತೆಯ ಉಜ್ವಲ ಉದಾಹರಣೆಗಳಾಗಿವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ನಾನು ಸ್ಪಷ್ಟವಾಗಿ ಹೇಳುತ್ತೇನೆ, ಭಾರತಕ್ಕೆ ಪ್ರವೇಶಿಸುವ ಅಥವಾ ನಮ್ಮ ಪ್ರದೇಶವನ್ನ ಸಾರಿಗೆ ಮಾರ್ಗವಾಗಿ ಬಳಸಿಕೊಂಡು ದೇಶದಿಂದ ಹೊರಹೋಗುವ ಪ್ರತಿಯೊಂದು ಗ್ರಾಂ ಮಾದಕ ವಸ್ತುಗಳನ್ನೂ ನಾವು ನಿಗ್ರಹಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವರು ಶಪಥ ಮಾಡಿದ್ದಾರೆ. ಅಲ್ಲದೇ ಈ ಮಹತ್ತರ ಕಾರ್ಯಾಚರಣೆ ನಡೆಸಿದ ಎನ್ಸಿಬಿ ಯೋಧರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.

















