ಕೊಲ್ಕತ್ತಾ : ಇಂಡಿಯನ್ ಪ್ರೀಮಿಯರ್ ಲೀಗ್ನ 60ನೇ ಪಂದ್ಯ ಈಡನ್ ಗಾರ್ಡನ್ಸ್ ಕ್ರಿಕೆಟ್ ಮೈದಾನದಲ್ಲಿ ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳ ನಡುವೆ ನಡೆಯಲಿದೆ. ಆರಂಭದಲ್ಲಿ 7 ಪಂದ್ಯಗಳನ್ನಾಡಿ ಕೇವಲ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಜಿಟಿ ಸತತ ಐದು ಗೆಲುವುಗಳೊಂದಿಗೆ ಭರ್ಜರಿ ಕಮ್ಬ್ಯಾಕ್ ಮಾಡಿದೆ.
ಪಾಯಿಂಟ್ಸ್ ಟೇಬಲ್ನಲ್ಲಿ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡ ಈಗಾಗಲೇ ತನ್ನ ಪ್ಲೇ ಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಇತ್ತ ಹನ್ನೊಂದು ಪಂದ್ಯಗಳನ್ನಾಡಿ 9 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿರುವ ಕೆಕೆಆರ್ ತಂಡ ಇಂದು ಔಪಚಾರಿಕ ಪಂದ್ಯವನ್ನಾಡಲಿದೆ. ಒಂದು ವೇಳೆ ಜಿಟಿ ಇಂದು ಗೆದ್ದರೆ 18 ಅಂಕಗಳೊಂದಿಗೆ ಆರ್ಸಿಬಿಯನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಲಿದೆ.
ಕಳೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 82 ರನ್ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಶುಭಮನ್ ಗಿಲ್ ನೇತೃತ್ವದ ಗುಜರಾತ್, ಕೊಲ್ಕತ್ತಾ ವಿರುದ್ಧವೂ ತನ್ನ ಪಾರಮ್ಯ ಮುಂದುವರೆಸುವ ತವಕದಲ್ಲಿದೆ. ಆರ್ಸಿಬಿ ವಿರುದ್ಧ ಪರಾಭವಗೊಂಡಿದ್ದ ಕೆಕೆಆರ್ ತಂಡ ಜಿಟಿ ವಿರುದ್ಧದ ಈ ಪಂದ್ಯದಲ್ಲಿ ಗೆದ್ದು ಮುಂದಿನ ಎರಡು ಪಂದ್ಯಗಳಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ.

ಪಿಚ್ ರಿಪೋರ್ಟ್ ಹೇಗಿದೆ? – ಈಡನ್ ಗಾರ್ಡನ್ ಪಿಚ್ ಬ್ಯಾಟಿಂಗ್ ಸಹಕಾರಿ ಪಿಚ್ ಆಗಿದ್ದು, ಬ್ಯಾಟರ್ಗಳಿಂದ ಬಿಗ್ ಇನಿಂಗ್ಸ್ ನಿರೀಕ್ಷಿಸಬಹುದು. ಈ ಪಿಚ್ ಸ್ಪಿನ್ ಮತ್ತು ವೇಗದ ಬೌಲರ್ಸ್ ಇಬ್ಬರಿಗೂ ಸಹಕಾರಿಯಾಗಲಿದೆ. ಈ ಪಿಚ್ನಲ್ಲಿ ವೇಗಿಗಳಿಗೆ ಹೋಲಿಸಿದರೆ ಸ್ಪಿನ್ನರ್ಸ್ ಹೆಚ್ಚು ಪ್ರಾಬಲ್ಯ ಸಾಧಿಸಿದ್ದಾರೆ.
ಕೆಕೆಆರ್ ಸಂಭಾವ್ಯ ಪ್ಲೇಯಿಂಗ್-11 – ಫಿನ್ ಅಲೆನ್, ಅಜಿಂಕ್ಯ ರಹಾನೆ (ನಾಯಕ), ಆಂಗ್ಕ್ರಿಶ್ ರಘುವಂಶಿ, ಕ್ಯಾಮರೂನ್ ಗ್ರೀನ್, ರಿಂಕು ಸಿಂಗ್, ಮನೀಶ್ ಪಾಂಡೆ, ರೋವ್ಮನ್ ಪೊವೆಲ್, ಸುನಿಲ್ ನರೇನ್, ಅನುಕುಲ್ ರಾಯ್, ಕಾರ್ತಿಕ್, ಸೌರಭ್ ದುಬೆ.
ಟೈಟಾನ್ಸ್ ಸಂಭಾವ್ಯ ಪ್ಲೇಯಿಂಗ್-11 – ಶುಭಮನ್ ಗಿಲ್ (ನಾಯಕ), ಬಿ ಸಾಯಿ ಸುದರ್ಶನ್, ಜೋಸ್ ಬಟ್ಲರ್, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ನಿಶಾಂತ್ ಸಿಂಧು, ರಾಹುಲ್ ತೆವಾಟಿಯ, ರಶೀದ್ ಖಾನ್, ಅರ್ಷದ್ ಖಾನ್, ಕಗಿಸೋ ರಬಾಡ, ಸಾಯಿ ಕಿಶೋರ್.

















