Meta ಕಂಪನಿಯ ಹೊಸ AI ನೀತಿ ಇದೀಗ ವಿಶ್ವದಾದ್ಯಂತ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಡಿತ ಸಾಮಾನ್ಯವಾಗುತ್ತಿರುವ ನಡುವೆಯೇ, ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಮೊದಲು ಅವರ ಕೆಲಸದ ಕೌಶಲ ಹಾಗೂ ಕಾರ್ಯಪದ್ಧತಿಯನ್ನು ಟ್ರ್ಯಾಕ್ ಮಾಡಲಾಗಿದೆ ಎಂಬ ಆರೋಪ ಮೆಟಾ ವಿರುದ್ಧ ಕೇಳಿಬಂದಿದೆ. ಇದರಿಂದ ಉದ್ಯೋಗಿಗಳಲ್ಲಿ ಅಸಮಾಧಾನ ಮತ್ತು ಆತಂಕ ಹೆಚ್ಚಾಗಿದೆ.
Facebook ಹಾಗೂ Instagram ಮಾಲೀಕತ್ವ ಹೊಂದಿರುವ ಮೆಟಾ ಕಂಪನಿಯು ತನ್ನ Artificial Intelligence (AI) ತಂತ್ರಜ್ಞಾನ ಅಭಿವೃದ್ಧಿಗಾಗಿ ಉದ್ಯೋಗಿಗಳ ದೈನಂದಿನ ಕೆಲಸದ ವಿಧಾನವನ್ನು ದಾಖಲಿಸುತ್ತಿದೆ ಎಂದು ವರದಿಯಾಗಿದೆ. ಉದ್ಯೋಗಿಗಳು ಕಂಪ್ಯೂಟರ್ ಬಳಸುವ ವೇಳೆ ಮಾಡುವ ಕೀಸ್ಟ್ರೋಕ್, ಮೌಸ್ ಕ್ಲಿಕ್, ಆಂತರಿಕ ಅಪ್ಲಿಕೇಶನ್ ಬಳಕೆ ಸೇರಿದಂತೆ ಹಲವು ಮಾಹಿತಿಗಳನ್ನು ಕಂಪನಿ ಸಂಗ್ರಹಿಸುತ್ತಿದೆ ಎನ್ನಲಾಗಿದೆ. ಈ ಮಾಹಿತಿ AI ಮಾದರಿಗಳಿಗೆ ತರಬೇತಿ ನೀಡಲು ಬಳಸಲಾಗುತ್ತಿದೆ ಎಂಬ ವಿಚಾರ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಸಂಬಂಧ BBC News ವರದಿ ಪ್ರಕಟಿಸಿದ್ದು, ಮೆಟಾ ಇತ್ತೀಚೆಗೆ ಉದ್ಯೋಗಿಗಳಿಗೆ ಹೊಸ ಟ್ರ್ಯಾಕಿಂಗ್ ಉಪಕರಣವನ್ನು ಪರಿಚಯಿಸಿದೆ ಎಂದು ತಿಳಿಸಿದೆ. ಕಂಪನಿಯ ಆಂತರಿಕ ಕಂಪ್ಯೂಟರ್ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಚಟುವಟಿಕೆಗಳನ್ನು ಗಮನಿಸಿ ದಾಖಲಿಸುವ ವ್ಯವಸ್ಥೆ ಆತಂಕಕ್ಕೆ ಕಾರಣವಾಗಿದೆ.
ಮೆಟಾ ಕಂಪನಿಯ ವಕ್ತಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “AI ಏಜೆಂಟ್ ಗಳನ್ನು ಅಭಿವೃದ್ಧಿಪಡಿಸಲು ಜನರು ಕಂಪ್ಯೂಟರ್ ಅನ್ನು ನೈಜವಾಗಿ ಹೇಗೆ ಬಳಸುತ್ತಾರೆ ಎಂಬುದರ ಉದಾಹರಣೆಗಳು ಅಗತ್ಯವಾಗಿವೆ. ಸಂಗ್ರಹವಾಗುವ ಮಾಹಿತಿಯನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಲಾಗುವುದಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಮೆಟಾ ಉದ್ಯೋಗಿಯೊಬ್ಬರು, ಕಂಪನಿಯ ಕ್ರಮದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಉದ್ಯೋಗ ಕಡಿತದ ಆತಂಕ ನಡುವೆ ಕಾರ್ಮಿಕರ ಪ್ರತಿಯೊಂದು ಸಣ್ಣ ಚಟುವಟಿಕೆಯನ್ನು AI ತರಬೇತಿಗಾಗಿ ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಕಂಪನಿಯು ಸುರಕ್ಷತಾ ಕ್ರಮಗಳಿವೆ ಎಂದು ಹೇಳುತ್ತಿದ್ದರೂ, ಉದ್ಯೋಗಿಗಳ ಖಾಸಗಿ ಕೆಲಸದ ಮಾಹಿತಿಯನ್ನು ಈ ರೀತಿಯಾಗಿ ಟ್ರ್ಯಾಕ್ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಇದಲ್ಲದೆ, ಇತ್ತೀಚೆಗೆ ಮೆಟಾ ತೊರೆದ ಮತ್ತೊಬ್ಬ ಮಾಜಿ ಉದ್ಯೋಗಿಯೂ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. AI ತಂತ್ರಜ್ಞಾನವನ್ನು ಉದ್ಯೋಗಿಗಳ ಮೇಲೆ ಬಲವಂತವಾಗಿ ಹೇರಲು ಈ ರೀತಿಯ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಕಂಪನಿಯು Artificial Intelligence ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಕಾರಣ, ಉದ್ಯೋಗಿಗಳ ಕೆಲಸದ ಮಾದರಿಗಳನ್ನು AI ಗೆ ಕಲಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದೇ ವೇಳೆ, ಮೆಟಾ ಈಗಾಗಲೇ ಈ ವರ್ಷ ದೊಡ್ಡ ಪ್ರಮಾಣದಲ್ಲಿ Layoff ನಡೆಸಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ. ಮುಂದಿನ ತಿಂಗಳುಗಳಲ್ಲಿ ಮತ್ತಷ್ಟು ಉದ್ಯೋಗ ಕಡಿತ ನಡೆಯುವ ಸಾಧ್ಯತೆ ಇದೆ ಎಂಬ ಆತಂಕವೂ ಉದ್ಯೋಗಿಗಳಲ್ಲಿ ಹೆಚ್ಚಾಗಿದೆ.
AI ತಂತ್ರಜ್ಞಾನ ಅಭಿವೃದ್ಧಿ ಹೆಸರಿನಲ್ಲಿ ಉದ್ಯೋಗಿಗಳ ಕೆಲಸದ ಶೈಲಿ ಮತ್ತು ಕೌಶಲಗಳನ್ನು ದಾಖಲಿಸುವ ಕ್ರಮ ನೈತಿಕವೇ ಎಂಬ ಪ್ರಶ್ನೆ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಉದ್ಯೋಗಿಗಳ ಖಾಸಗಿತನ, ಡೇಟಾ ಸುರಕ್ಷತೆ ಮತ್ತು ಉದ್ಯೋಗ ಭದ್ರತೆ ಕುರಿತು ಹಲವು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಮೆಟಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿಯೂ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

















