ಬಳ್ಳಾರಿ: ರಾಜ್ಯ ಸರ್ಕಾರದ ಮೂರು ವರ್ಷದ ಆಡಳಿತವನ್ನು ತೀವ್ರವಾಗಿ ಟೀಕಿಸಿದ ಬಿಜೆಪಿ ನಾಯಕ ಬಿ. ಶ್ರೀರಾಮುಲು, ಮೂರು ವರ್ಷದಲ್ಲಿ ನೂರು ಸುಳ್ಳು ಹೇಳಿರುವುದೇ ಸರ್ಕಾರದ ಸಾಧನೆ. ಅದನ್ನೇ ಈಗ ಸಮಾವೇಶದ ಮೂಲಕ ಜನರಿಗೆ ತೋರಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸುಳ್ಳಿನ ಮಾಲೀಕರಾದರೆ, ಡಿ.ಕೆ. ಶಿವಕುಮಾರ್ ಆ ಸುಳ್ಳಿನ ಸಾಕ್ಷಿದಾರರು. ಸುಳ್ಳಿನ ಅಡಿಪಾಯದ ಮೇಲೆಯೇ ಈ ಸರ್ಕಾರ ನಡೆಯುತ್ತಿದೆ. ರಾಜ್ಯದ ರೈತರ ಪರಿಸ್ಥಿತಿ ಹದಗೆಟ್ಟಿದ್ದು, ರೈತರಿಗೆ ಸಮರ್ಪಕ ನೆರವು ಸಿಗುತ್ತಿಲ್ಲ. ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹಧನ ಬಾಕಿಯಿದೆ. ಬೀಜ ಮತ್ತು ಕೃಷಿ ವೆಚ್ಚಗಳು ಏರಿಕೆಯಾಗಿವೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಆತ್ಮಹತ್ಯೆಗಳ ಪ್ರಮಾಣ ಹೆಚ್ಚುತ್ತಿದೆ. ರೈತರ ಬದುಕು ಉಳಿಸುವ ಬದಲು ಸರ್ಕಾರ ರೈತರ ಆತ್ಮಹತ್ಯೆ ಭಾಗ್ಯ ನೀಡುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು ಎನ್ನಲಾಗಿದೆ.
ರೈತರ ಸಾವಿನ ಅಂಕಿ – ಅಂಶಗಳನ್ನು ಉಲ್ಲೇಖಿಸಿದ ಶ್ರೀರಾಮುಲು, ಇದು ಮಾನಗೆಟ್ಟ ಸರ್ಕಾರ. ರೈತರ ನೋವಿಗೆ ಸ್ಪಂದಿಸುವ ಬದಲು ಸರ್ಕಾರ ರಾಜಕೀಯ ಸಮಾವೇಶಗಳಲ್ಲಿ ತೊಡಗಿದೆ. ಕೇಂದ್ರ ಸರ್ಕಾರದ ರಸಗೊಬ್ಬರಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರದ ಕಿಸಾನ್ ಸನ್ಮಾನ್ ಯೋಜನೆ ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ನೀರು, ವಿದ್ಯುತ್, ಭೂ ನೋಂದಣಿ ಸೇರಿದಂತೆ ಎಲ್ಲ ಸೇವೆಗಳ ದರ ಏರಿಕೆಯಾಗಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಮರಳು ಮಾಡುವ ಕೆಲಸ ನಡೆಯುತ್ತಿದೆ. ಜನರಿಗೆ ಶಾಶ್ವತ ಅಭಿವೃದ್ಧಿ ನೀಡುವ ಬದಲು ಮೋಸದ ರಾಜಕಾರಣ ನಡೆಯುತ್ತಿದೆ ಎಂದು ದೂರಿದ್ದಾರೆ. ರಾಜ್ಯದ ಸಾರಿಗೆ ಇಲಾಖೆಯ ಸ್ಥಿತಿಗತಿಗಳ ಕುರಿತು ಮಾತನಾಡಿದ ಅವರು, ಕೆಎಸ್ಆರ್ಟಿಸಿ ನೌಕರರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಾರಿಗೆ ನೌಕರರ ಮುಷ್ಕರ ತಡೆಯಲು ಸರ್ಕಾರಕ್ಕೆ ಆಗುತ್ತಿಲ್ಲ. ವೇತನ ಹೆಚ್ಚಳವೂ ಇಲ್ಲ. ಹಳೆಯ ಬಸ್ಗಳೇ ರಸ್ತೆಯಲ್ಲಿ ಓಡುತ್ತಿವೆ. ಪಂಚರ್ ಹಾಕಿಸಲು ಹಣವಿಲ್ಲದ ಪರಿಸ್ಥಿತಿ ಬಂದಿದೆ. ಬಾಗಿಲುಗಳು ಕಿತ್ತು ಹೋದರೂ ದುರಸ್ತಿ ಮಾಡಲಾಗುತ್ತಿಲ್ಲ ಎಂದು ಟೀಕಿಸಿದರು. ಅಂಗನವಾಡಿ ನೌಕರರು ಹಾಗೂ ಸರ್ಕಾರಿ ನೌಕರರ ಸಂಬಳದ ವಿಷಯದಲ್ಲಿಯೂ ಸರ್ಕಾರ ವಿಫಲವಾಗಿದೆ. ಎಲ್ಲಾ ಇಲಾಖೆಗಳಲ್ಲೂ ಆಡಳಿತ ಸಂಪೂರ್ಣ ಕುಸಿದಿದೆ.
ಇಂತಹ ಸಂದರ್ಭದಲ್ಲಿ ಮೂರು ವರ್ಷದ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ? ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಕೆಲಸ ನಡೆಯುತ್ತಿದೆ. ಹಿಜಾಬ್ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಇರುವಾಗಲೇ ಸರ್ಕಾರ ನಿಷೇಧ ಹಿಂಪಡೆಯಲು ಮುಂದಾಗಿರುವುದು ಯಾಕೆ? ಇದು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಎಂದಿದ್ದಾರೆ. ಹಾಗೂ ಕಾಂಗ್ರೆಸ್ ನಾಯಕ ನಾಸೀರ್ ಹುಸೇನ್ ಕುರಿತ ವಿವಾದವನ್ನು ಉಲ್ಲೇಖಿಸಿದ ಅವರು, “ಪಾಕಿಸ್ತಾನ ಪರ ಘೋಷಣೆಗಳ ವಿಚಾರದಲ್ಲಿಯೂ ಕಾಂಗ್ರೆಸ್ ಮೌನವಾಗಿದೆ” ಎಂದು ಆರೋಪಿಸಿದ್ದಾರೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಸರ್ಕಾರದಿಂದ ನಡೆಯುತ್ತಿದೆ ಎಂದು ದೂರಿದ ಅವರು, ಹಿಂದೂ ಹಬ್ಬಗಳ ಮೇಲೂ ದಾಳಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಅಂತರ್ದ್ವಂದ್ವ ನಡೆಯುತ್ತಿದೆ ಎಂದು ಆರೋಪಿಸಿದ ಶ್ರೀರಾಮುಲು, “ಈಗ ಸಿದ್ದರಾಮಯ್ಯ ಡಬ್ಬಿಯೇ ಹೆಚ್ಚು ಸೌಂಡ್ ಮಾಡುತ್ತಿದೆ” ಎಂದು ವ್ಯಂಗ್ಯವಾಡಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣವನ್ನು ಉಲ್ಲೇಖಿಸಿದ ಅವರು, ಹಗರಣದಲ್ಲಿ ಹಣ ಹೊಡೆದಿದ್ದಕ್ಕೆ ಸಮಾವೇಶ ಮಾಡುತ್ತಿದ್ದೀರಾ? ರೈತರ ಸಾವಿಗೆ ಸಮಾವೇಶ ಮಾಡುತ್ತಿದ್ದೀರಾ?” ಎಂದು ಪ್ರಶ್ನಿಸಿದರು. ಕುಕ್ಕರ್ ಬಾಂಬ್ ಪ್ರಕರಣದ ಆರೋಪಿಗಳನ್ನು “ಬ್ರದರ್” ಎಂದು ಕರೆಯಲಾಗಿದೆ ಎಂದು ಟೀಕಿಸಿದ ಅವರು, “ಯಾವ ಸಾಧನೆಗಾಗಿ ಸಮಾವೇಶ ಮಾಡುತ್ತಿದ್ದಾರೆ ಎಂಬುದನ್ನು ಸರ್ಕಾರವೇ ಹೇಳಬೇಕು ಎಂದರು. ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಮೀಸಲಿಡಲಾಗುತ್ತಿದೆ ಎಂದು ಆರೋಪಿಸಿದ ಶ್ರೀರಾಮುಲು, “ಒಂದು ಸಮುದಾಯದ ಓಲೈಕೆಗಾಗಿ ಸರ್ಕಾರ ಆಡಳಿತ ನಡೆಸುತ್ತಿದೆ. ಹಿಂದೂಗಳ ಮೇಲೆ ಮಾತ್ರ ಪ್ರಕರಣ ದಾಖಲಿಸುವ ರಾಜಕಾರಣ ನಡೆಯುತ್ತಿದೆ” ಎಂದು ದೂರಿದರು. ರಾಜ್ಯದ ಜನರು ಕಾಂಗ್ರೆಸ್ ಆಡಳಿತದಿಂದ ಬೇಸತ್ತಿದ್ದಾರೆ ಎಂದು ಹೇಳಿದ ಅವರು, ಸೂರ್ಯ ಮತ್ತು ಚಂದ್ರ ಇರುವಷ್ಟು ಸತ್ಯವಾಗಿ 2028ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂಬುದಾಗಿದೆ.

















