ಆತ್ರೇಯಪುರಂ (ಆಂಧ್ರ ಪ್ರದೇಶ): ನೇತ್ರದಾನ ಸರ್ವಕಾಲಕ್ಕೂ ಶ್ರೇಷ್ಠದಾನ. ಪ್ರತಿಯೊಬ್ಬರೂ ತಮ್ಮ ಅಮೂಲ್ಯವಾದ ದೃಷ್ಟಿಯನ್ನು ತಮ್ಮ ಜೀವಿತಾವಧಿಯ ನಂತರ ಮತ್ತೊಬ್ಬರಿಗೆ ನೀಡುವ ಮೂಲಕ ದೃಷ್ಟಿ ಇಲ್ಲದವರಿಗೂ ಬೆಳಕಾಗಬಹುದು. ಇದನ್ನರಿತ ಡಾ. ಬಿ.ಆರ್. ಅಂಬೇಡ್ಕರ್ ಕೊನಸೀಮಾ ಜಿಲ್ಲೆಯ ಪೆರವರಂ ಎಂಬ ಗ್ರಾಮದ ನಿವಾಸಿಗಳು ನೇತ್ರದಾನ ಮಾಡುವುದರಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ಎನ್ನಲಾಗಿದೆ. ಪುಟ್ಟ ಗ್ರಾಮವಾದರೂ ಅತ್ಯಧಿಕವಾಗಿ ನೇತ್ರದಾನ ಮಾಡುವ ಮೂಲಕ ತಮ್ಮ ಕಣ್ಣುಗಳನ್ನು ತಮ್ಮ ಸಾವಿನ ನಂತರವು ಈ ಸುಂದರವಾದ ಪ್ರಪಂಚವನ್ನು ನೋಡಲು ಇನ್ನೊಬ್ಬರಿಗೆ ಬಳಕೆಯಾಗಿದ್ದಾರೆ. ಕಳೆದ 10 ವರ್ಷಗಳಲ್ಲಿ ಸುಮಾರು 170 ಮಂದಿ ಗ್ರಾಮಸ್ಥರು ತಮ್ಮ ಕಣ್ಣುಗಳನ್ನು ದಾನ ಮಾಡಿರುವುದು ಗಮನಾರ್ಹ. ಇದು ಅಸಂಖ್ಯಾತ ದೃಷ್ಟಿಹೀನ ವ್ಯಕ್ತಿಗಳಿಗೆ ಪುನಃ ದೃಷ್ಟಿ ಬರಲು ಬಹು ಮುಖ್ಯ ಕಾರಣವಾಗಿದೆ. ಸುಮಾರು 5,000 ಜನಸಂಖ್ಯೆಯನ್ನು ಹೊಂದಿರುವ ಪೆರಾವರಂ ಗ್ರಾಮವು ಸುತ್ತಮುತ್ತಲಿನ ಹಲವು ಹಳ್ಳಿಗಳಿಗೆ ಸ್ಫೂರ್ತಿಯಾಗಿ ಹೊರಹೊಮ್ಮಿದೆ.
ಇಲ್ಲಿನ ನಿವಾಸಿಗಳು ಯಾರೇ ನಿಧನರಾಗಲಿ, ಅವರ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ತಕ್ಷಣವೇ ಹತ್ತಿರದ ಕಣ್ಣಿನ ಬ್ಯಾಂಕುಗಳಿಗೆ ತಿಳಿಸುತ್ತಾರೆ. ಈ ಮಾಹಿತಿ ಪಡೆದ ವೈದ್ಯರು, ಗ್ರಾಮಕ್ಕೆ ಆಗಮಿಸಿ ಅಗತ್ಯವಿರುವ ಸಮಯದೊಳಗೆ ಕಾರ್ನಿಯಾಗಳನ್ನು ಪಡೆದು ಹೋಗುತ್ತಾರೆ. ಈ ಸಾಮೂಹಿಕ ಅರಿವು ಮತ್ತು ಇತರರಿಗೆ ಸಹಾಯ ಮಾಡುವ ಇಚ್ಛಾಶಕ್ತಿಯು ಗ್ರಾಮವನ್ನು ಸಾಮಾಜಿಕ ಪ್ರಜ್ಞೆಯ ಸಂಕೇತವಾಗಿ ಪರಿವರ್ತಿಸಿದೆ ಎನ್ನುತ್ತಾರೆ ಗ್ರಾಮಸ್ಥರು. ಮುಳ್ಳಪುಡಿ ಸತ್ಯನಾರಾಯಣ ಮತ್ತು ಕೃಷ್ಣ ಮೋಹನ್ ಅವರಂತಹ ಸಾಮಾಜಿಕ ಪ್ರಜ್ಞೆಯುಳ್ಳ ನಿವಾಸಿಗಳು ನಡೆಸಿದ ನಿರಂತರ ಜಾಗೃತಿ ಅಭಿಯಾನದ ಮೂಲಕ ಈ ನೇತ್ರದಾನ ಚಳವಳಿ ಮತ್ತಷ್ಟು ವೇಗ ಪಡೆದುಕೊಂಡಿದೆ. ನೇತ್ರದಾನದ ಮಹತ್ವದ ಬಗ್ಗೆ ಅವರು ಜನರಿಗೆ ತಿಳುವಳಿಕೆ ನೀಡುತ್ತಾ ಬರುತ್ತಿದ್ದಾರೆ. ನೇತ್ರದಾನವು ಇಬ್ಬರು ಅಂಧರ ಜೀವನವನ್ನು ಹೇಗೆ ಬೆಳಗಿಸುತ್ತದೆ ಎಂಬುದನ್ನು ಮನದಟ್ಟು ಮಾಡುತ್ತಿದ್ದಾರೆ. ದುಃಖದ ಕ್ಷಣಗಳಲ್ಲಿಯೂ ಸಹ, ವೈಯಕ್ತಿಕವಾಗಿ ದುಃಖಿತ ಕುಟುಂಬಗಳನ್ನು ಭೇಟಿ ಮಾಡಿ ನೇತ್ರದಾನಕ್ಕೆ ಒಪ್ಪಿಗೆ ನೀಡುವಂತೆ ಪ್ರೋತ್ಸಾಹಿಸುತ್ತಾರೆ.
ಆದರಿಂದ ಅವರ ಈ ಪ್ರಯತ್ನ ಫಲವಾಗಿ ಕಳೆದ 10 ವರ್ಷಗಳಲ್ಲಿ, ಗ್ರಾಮದಿಂದ 170 ನೇತ್ರದಾನಗಳು ದಾಖಲಾಗಿವೆ. ಗ್ರಾಮೀಣ ಭಾಗದಲ್ಲಿ ಈ ಸಂಖ್ಯೆ ಹೆಚ್ಚು ಅಂತಲೇ ಹೇಳಲಾಗುತ್ತಿದೆ. ಈ ಗ್ರಾಮಸ್ಥರಿಂದ ಪ್ರೇರಿತರಾಗಿ, ನೆರೆಯ ಹಳ್ಳಿಗಳ ಜನರು ಕೂಡ ಮರಣದ ನಂತರ ತಮ್ಮ ಕಣ್ಣುಗಳನ್ನು ನೀಡುವ ಪ್ರತಿಜ್ಞೆ ಮಾಡಲು ಮುಂದೆ ಬರುತ್ತಿದ್ದಾರೆ. ಮಾನವೀಯತೆಗೆ ಇದೊಂದು ಉತ್ತಮ ಉದಾಹರಣೆಯಾಗಿದೆ ಎಂದು ಜನ ಮಾತನಾಡುತ್ತಿದ್ದಾರೆ ಎನ್ನಲಾಗಿದೆ.
















