ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಒಂದು ವರ್ಷದ ಶಿಕ್ಷೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್, ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. ಆರೋಪಿಗಳಾದ ಮಂಜನಾಯ್ಕ ಮತ್ತು ಶಂಕರ್ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ ಎನ್ನಲಾಗುತ್ತಿದೆ.
ಈ ಕುರಿತು ಪೊಲೀಸರು ವಶಪಡಿಸಿಕೊಂಡ ಭಾರಿ ಪ್ರಮಾಣದ ಮದ್ಯಕ್ಕೆ ಸೂಕ್ತ ದಾಖಲೆ ಇಲ್ಲದಿರುವುದು ಮತ್ತು ಸಾಕ್ಷಿಗಳ ಹೇಳಿಕೆಗಳು ಸಾಬೀತಾಗಿರುವುದರಿಂದ ಕೆಳ ನ್ಯಾಯಾಲಯಗಳ ಆದೇಶದಲ್ಲಿ ಯಾವುದೇ ದೋಷವಿಲ್ಲ. ಅಲ್ಲದೆ, ರಸ್ತೆಯಲ್ಲಿ ಚಲಿಸುವ ವಾಹನಗಳನ್ನು ತಪಾಸಣೆ ಮಾಡಲು ವಾರಂಟ್ ಪಡೆಯಬೇಕು ಎಂಬ ನಿಯಮ ಕಡ್ಡಾಯವಲ್ಲ ಎಂದು ತಿಳಿಸಿದೆ. ಅಲ್ಲದೆ, ಪ್ರಕರಣ ಸಂಬಂಧ ದಾಳಿ ನಡೆಸಿರುವ ಪೊಲೀಸರು, ಮತ್ತು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿರುವ ಸಾಕ್ಷಿಗಳಿಗೆ ಆರೋಪಿಗಳ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವನ್ನು ಹೊಂದಿಲ್ಲ. ಆದ್ದರಿಂದ ಅವರು ಆರೋಪಿಗಳನ್ನು ಸಿಲುಕಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ತಿಳಿಸಿದ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಜತೆಗೆ, ಅಪರಾಧಿಗಳು ಒಂದು ವರ್ಷ ಶಿಕ್ಷೆ ಅನುಭವಿಸಲು ಜೂನ್ 5, 2026 ರೊಳಗಾಗಿ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಬೇಕು ಎಂದು ಆದೇಶಿಸಿದೆ ಎನ್ನಲಾಗುತ್ತಿದೆ.
















