ಢಾಕಾ: ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಚಿತ್ತಗಾಂಗ್ನಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್ ಕಚೇರಿಯಲ್ಲಿ ಅಧಿಕಾರಿ ನರೇನ್ ಧರ್ ಅವರ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಮರಣೋತ್ತರ ಪರೀಕ್ಷೆಗಾಗಿ ಚಿತ್ತಗಾಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದ್ದು ಸಾವಿಗೆ ನಿಖರವಾದ ಕಾರಣ ಏನೆಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಈ ಕುರಿತು ಇಲ್ಲಿನ ಕಚೇರಿಯಲ್ಲಿ ನರೇನ್ ಧರ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬೆಳಿಗ್ಗೆ 9:30ರ ಸುಮಾರಿಗೆ ಅವರು ಮೃತಪಟ್ಟಿರುವುದಾಗಿ ಕರೆ ಮೂಲಕ ನಮಗೆ ತಿಳಿಸಲಾಯಿತು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸಿಎಂಸಿ ಆಸ್ಪತ್ರೆಗೆ ರವಾನಿಸಿದರು ಎಂದು ಘಟನೆಯ ಕುರಿತು ನಗರ ಪೊಲೀಸ್ ಸಹಾಯಕ ಕಮಿಷನರ್ ರಶೀದ್ ಮಾಹಿತಿ ನೀಡಿದ್ದಾರೆ. ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಬಾಂಗ್ಲಾದೇಶ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸದ್ಯಕ್ಕೆ ಸೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದ್ದು, ವರದಿ ಬಂದ ನಂತರವಷ್ಟೇ ಸಾವಿನ ಹಿಂದಿನ ಅಸಲಿ ಕಾರಣ ತಿಳಿದು ಬರಲಿದೆ ಎನ್ನಲಾಗುತ್ತಿದೆ.

















