ಚಿಕ್ಕಮಗಳೂರು: ಜಿಲ್ಲೆಯ ಸಿಐಡಿ ಅರಣ್ಯ ಘಟಕದ ಪೊಲೀಸರು ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಜಿಂಕೆಯನ್ನು ಬೇಟೆಯಾಡಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಅತ್ತಿಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ವೆಂಕರಮಣ, ಕನ್ನಿಯಪ್ಪನ್ ಹಾಗೂ ಸುರೇಶ್ ಎಂದು ಗುರುತಿಸಲಾಗಿದೆ ಎನ್ನಲಾಗಿದೆ.
ಈ ಪ್ರಕರನ ಕುರಿತು ದತ್ತಪೀಠಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳ ಬೇಟೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರೋಪಿಗಳು ಅರಣ್ಯಕ್ಕೆ ಅಕ್ರಮವಾಗಿ ನುಗ್ಗಿ ಜಿಂಕೆಯನ್ನು ಬೇಟೆಯಾಡಿದ್ದು, ಮೂವರನ್ನೂ ಬಂಧಿಸಿ, ತಮ್ಮ ವಶಕ್ಕೆ ಪಡೆದು ವಿಚಾರಣೆ ಆರಂಭಿಸಲಾಗಿದೆ ಎಂದು ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಗಳು ಬೇಟೆಗೆ ಬಳಸಿದ್ದ ಆಯುಧಗಳು, ಇತರ ಉಪಕರಣಗಳು ಸೇರಿದಂತೆ ಹಲವು ಸಾಕ್ಷ್ಯಾಧಾರಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಆರೋಪಿಗಳು ಈ ಹಿಂದೆ ಕೂಡ ಕಾಡು ಪ್ರಾಣಿ ಬೇಟೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತಾಗಿ ತನಿಖೆ ಮುಂದುವರೆದಿದೆ. ದತ್ತಪೀಠ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು ಅಪರೂಪದ ವನ್ಯಜೀವಿಗಳಿಗೆ ಆಶ್ರಯವಾಗಿದ್ದು, ಇಂತಹ ಅಕ್ರಮ ಬೇಟೆ ಪ್ರಕರಣಗಳು ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಕಾಡುಪ್ರಾಣಿ ಸಂರಕ್ಷಣೆಗಾಗಿ ಸರ್ಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೆ ತಂದಿದ್ದರೂ, ಕೆಲವರು ಹಣದ ಆಸೆಗಾಗಿ ಅಥವಾ ಮಾಂಸದ ಉದ್ದೇಶದಿಂದ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿರುವುದು ವಿಷಾದನೀಯವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಐಡಿ ಅರಣ್ಯ ಘಟಕ ಜಂಟಿಯಾಗಿ ಬೇಟೆಗಾರರ ಮೇಲೆ ಕಣ್ಣಿಟ್ಟಿದ್ದು, ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ ಎನ್ನಬಹುದು.

















