ಮನೆ ಸುದ್ದಿ ಜಾಲ ಚೂಡಿದಾರ ಉಡುಪು ಸಾಗಣೆ ನೆಪದಲ್ಲಿ ಬೆಂಗಳೂರಿಗೆ ಡ್ರಗ್ಸ್ ಪೂರೈಕೆ: ₹35 ಕೋಟಿ ಮೌಲ್ಯದ ಎಂಡಿಎಂಎ ಜಪ್ತಿ

ಚೂಡಿದಾರ ಉಡುಪು ಸಾಗಣೆ ನೆಪದಲ್ಲಿ ಬೆಂಗಳೂರಿಗೆ ಡ್ರಗ್ಸ್ ಪೂರೈಕೆ: ₹35 ಕೋಟಿ ಮೌಲ್ಯದ ಎಂಡಿಎಂಎ ಜಪ್ತಿ

0

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru Drug Case) ಮತ್ತೊಂದು ಭಾರೀ ಡ್ರಗ್ಸ್ ಜಾಲವನ್ನು ಪೊಲೀಸರು ಭೇದಿಸಿದ್ದು, ಚೂಡಿದಾರ ಉಡುಪು ಸಾಗಾಣಿಕೆ ಹೆಸರಿನಲ್ಲಿ ದೆಹಲಿಯಿಂದ ಎಂಡಿಎಂಎ ಡ್ರಗ್ಸ್ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಗ್ಯಾಂಗ್ ಅನ್ನು ಬಂಧಿಸಲಾಗಿದೆ. ಹೆಬ್ಬಾಳ ಪೊಲೀಸ್ ಠಾಣೆ (Hebbal Police) ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಸುಮಾರು ₹35 ಕೋಟಿ ಮೌಲ್ಯದ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಲಾಗಿದೆ.

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದು, ಉಪ ವಿಭಾಗ ಮಟ್ಟದಲ್ಲಿ ಇದುವರೆಗೆ ವಶಪಡಿಸಿಕೊಳ್ಳಲಾದ ಅತಿದೊಡ್ಡ ಡ್ರಗ್ಸ್ ಪ್ರಕರಣ ಇದಾಗಿದೆ ಎಂದು ತಿಳಿಸಿದ್ದಾರೆ. ಬಂಧಿತರನ್ನು ದೆಹಲಿಯ ರೀನಾ ಯಾದವ್ ಅಲಿಯಾಸ್ ಬಾಪಿ, ಧೀರಜ್, ಒಬೈನುಜು ರೀಟಾ ಒಕೆಕೆ ಅಲಿಯಾಸ್ ಸಾನಿಯಾ, ದೇಬಶಿಶ್ ಬ್ಯಾನರ್ಜಿ ಅಲಿಯಾಸ್ ದೆಬು, ಗುರುಗ್ರಾಮ್ ಮೂಲದ ಡೇವಿಡ್, ತಾಂಜೇನಿಯಾದ ಮ್ಯಾಗ್ರೇತ್ ಲಿಜಿನಿಕೋ ಚಲೆ, ಅಬ್ದುಲ್ ಸಮ್ಮದ್ ಹಾಗೂ ಬೆಂಗಳೂರಿನ ಚೂಡಸಂದ್ರ ನಿವಾಸಿ ಮೊಹಮ್ಮದ್ ಮನ್ಸೂರ್ ಎಂದು ಗುರುತಿಸಲಾಗಿದೆ.

ಪೊಲೀಸರು ಆರೋಪಿಗಳಿಂದ 17.5 ಕೆಜಿ ಎಂಡಿಎಂಎ ಡ್ರಗ್ಸ್ ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿಯಾದ ಡ್ರಗ್ಸ್ ಮೌಲ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ₹35 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಈ ಜಾಲವು ದೆಹಲಿ ಹಾಗೂ ಬೆಂಗಳೂರಿನ ನಡುವೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಹಿತಿ ಬಹಿರಂಗವಾಗಿದೆ.

ಕೆಲ ದಿನಗಳ ಹಿಂದೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಲಾಗಿತ್ತು. ಆ ಪ್ರಕರಣದ ತನಿಖೆ ವೇಳೆ ಮತ್ತೊಂದು ದೊಡ್ಡ ಡ್ರಗ್ಸ್ ಜಾಲದ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು. ಬಳಿಕ ಜಂಟಿ ಆಯುಕ್ತ ವಂಶಿಕೃಷ್ಣ ಹಾಗೂ ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಯಿತು. ಜೆ.ಸಿ.ನಗರ ಉಪ ವಿಭಾಗದ ಎಸಿಪಿ ಕೆ.ಎಸ್. ತನ್ವೀರ್ ನೇತೃತ್ವದಲ್ಲಿ ಸುಮಾರು 40 ಮಂದಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತು.

ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆ ಉನ್ನತಿ ಲೇಔಟ್ ಮುಖ್ಯ ರಸ್ತೆಯ ಅಪಾರ್ಟ್ಮೆಂಟ್ ಸಮೀಪ ಮೂವರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಲಾಯಿತು. ಅವರ ವಿಚಾರಣೆ ವೇಳೆ ದೊರೆತ ಮಾಹಿತಿಯ ಆಧಾರದ ಮೇಲೆ ದೆಹಲಿಯಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಪೂರೈಕೆದಾರರನ್ನು ಸೆರೆ ಹಿಡಿಯಲಾಯಿತು. ಈ ಮೂಲಕ ದೆಹಲಿ ಮೂಲದ ದೊಡ್ಡ ಡ್ರಗ್ಸ್ ಜಾಲ ಬೆಳಕಿಗೆ ಬಂದಿದೆ.

ತನಿಖೆ ವೇಳೆ ಡ್ರಗ್ಸ್ ಸಾಗಾಟದ ವಿಧಾನವೂ ಪೊಲೀಸರನ್ನು ಬೆಚ್ಚಿಬೀಳಿಸಿದೆ. ದೆಹಲಿಯಿಂದ ಬೆಂಗಳೂರಿಗೆ ಚೂಡಿದಾರ ಉಡುಪು ಸಾಗಿಸುವ ನೆಪದಲ್ಲಿ ಎಂಡಿಎಂಎ ಸಾಗಾಟ ಮಾಡಲಾಗುತ್ತಿತ್ತು. ಚೂಡಿದಾರದ ಒಳಭಾಗದಲ್ಲಿ ಮೂರು ಕೆಜಿ ತನಕ ಡ್ರಗ್ಸ್ ಅಡಗಿಸಲಾಗುತ್ತಿತ್ತು. ಅಲ್ಲದೆ ಇಸ್ತ್ರಿ ಟೇಬಲ್ ಬಾಕ್ಸ್ ಒಳಗೂ ಮಾದಕ ವಸ್ತುಗಳನ್ನು ಮರೆಮಾಚಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಡ್ರಗ್ಸ್ ಜಾಲ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಮೊದಲು ದೆಹಲಿಯಲ್ಲಿ ಡ್ರಗ್ಸ್ ದಾಸ್ತಾನು ಮಾಡಲಾಗುತ್ತಿತ್ತು. ನಂತರ ರೈಲು ಹಾಗೂ ಬಸ್ ಮೂಲಕ ಬೆಂಗಳೂರಿಗೆ ಸಾಗಾಟ ನಡೆಯುತ್ತಿತ್ತು. ಬಳಿಕ ನಗರದಲ್ಲಿರುವ ಪೆಡ್ಲರ್ ಗಳ ಮೂಲಕ ಗ್ರಾಹಕರಿಗೆ ಡ್ರಗ್ಸ್ ಪೂರೈಕೆ ಮಾಡಲಾಗುತ್ತಿತ್ತು. ಪ್ರತಿಯೊಂದು ಹಂತದಲ್ಲೂ ಆನ್ಲೈನ್ ಮೂಲಕ ಹಣ ವರ್ಗಾವಣೆ ನಡೆಯುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಇದೇ ವೇಳೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಮತ್ತೊಂದು ಡ್ರಗ್ಸ್ ಪ್ರಕರಣ ಪತ್ತೆಯಾಗಿದೆ. ಬ್ಯಾಂಕಾಕ್ ನಿಂದ ಬಂದ ಪ್ರಯಾಣಿಕನೊಬ್ಬನ ಬಳಿ ಸುಮಾರು ₹3.82 ಕೋಟಿ ಮೌಲ್ಯದ 10.92 ಕೆಜಿ ಹೈಡ್ರೋ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ವಿದೇಶದಿಂದ ಅಕ್ರಮವಾಗಿ ಡ್ರಗ್ಸ್ ಸಾಗಾಣಿಕೆ ಮಾಡಲು ಯತ್ನಿಸಿದ್ದ ಆರೋಪದ ಮೇಲೆ ಪ್ರಯಾಣಿಕನನ್ನು ಬಂಧಿಸಲಾಗಿದೆ.