ಬೆಂಗಳೂರು (ಮೇ.21): 2026-27ನೇ ಶೈಕ್ಷಣಿಕ ಸಾಲಿನ ಮೊದಲನೇ ತರಗತಿ ಪ್ರವೇಶಕ್ಕೆ ಸಂಬಂಧಿಸಿದ ವಯೋಮಿತಿ ಸಡಿಲಿಕೆ ವಿಚಾರ ಮತ್ತೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯ ಶಾಲಾ ಶಿಕ್ಷಣ ಇಲಾಖೆಗೆ ಮಹತ್ವದ ಸೂಚನೆ ನೀಡಿದ್ದು, ವಯೋಮಿತಿ ನಿಯಮದ ಕುರಿತು ಮರು ಪರಿಶೀಲನೆ ನಡೆಸಿ ಒಂದು ವಾರದೊಳಗೆ ಸೂಕ್ತ ಆದೇಶ ಹೊರಡಿಸುವಂತೆ ನಿರ್ದೇಶಿಸಿದೆ.
ಬೆಂಗಳೂರಿನ ಮಾಸ್ಟರ್ ಕೃಷ್ಣ ಗಣೇಶ್ ಸೇರಿದಂತೆ ಆರು ಮಂದಿ ವಿದ್ಯಾರ್ಥಿಗಳ ಪರವಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಪೀಠ ನಡೆಸಿತು. ವಿಚಾರಣೆ ವೇಳೆ ವಿದ್ಯಾರ್ಥಿಗಳು ಮತ್ತು ಪೋಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನ್ಯಾಯಾಲಯ ಗಮನ ಹರಿಸಿತು. ವಯೋಮಿತಿ ನಿಯಮದಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುವುದರಿಂದ, ಎಲ್ಲ ಆಯಾಮಗಳನ್ನೂ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚಿಸಲಾಯಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಶಾಲಾ ಶಿಕ್ಷಣ ಇಲಾಖೆ ಮಾರ್ಚ್ 28ರಂದು ಹೊರಡಿಸಿದ ಆದೇಶದ ಪ್ರಕಾರ ಮೊದಲನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯಸ್ಸಿನ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ ಎಂದು ತಿಳಿಸಿದರು. ಆದರೆ ಅರ್ಜಿದಾರರ ಮಕ್ಕಳು ಇನ್ನೂ ಆರು ವರ್ಷ ಪೂರೈಸಿಲ್ಲದಿದ್ದರೂ, ಈಗಾಗಲೇ 2025-26ನೇ ಸಾಲಿನ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಸರ್ಕಾರದ ಹೊಸ ಆದೇಶದಿಂದ ರಾಜ್ಯದ ಸುಮಾರು ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ವಕೀಲರು ವಾದಿಸಿದರು. ಪ್ರೀ-ಸ್ಕೂಲ್ ಹಾಗೂ ಯುಕೆಜಿ ಶಿಕ್ಷಣ ಮುಗಿಸಿರುವ ಮಕ್ಕಳಿಗೆ ಮತ್ತೆ ಅದೇ ತರಗತಿಯನ್ನು ಓದುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದರಿಂದ ಮಕ್ಕಳ ಶಿಕ್ಷಣದಲ್ಲಿ ಒಂದು ವರ್ಷದ ಹಿನ್ನಡೆ ಉಂಟಾಗುವ ಆತಂಕ ಎದುರಾಗಿದೆ ಎಂದು ಹೇಳಿದರು.
ಪೋಷಕರು ತಮ್ಮ ಮಕ್ಕಳು 2026-27ನೇ ಶೈಕ್ಷಣಿಕ ವರ್ಷದಲ್ಲಿ ಮೊದಲನೇ ತರಗತಿಗೆ ಸೇರ್ಪಡೆಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿ ಈಗಾಗಲೇ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ದಾಖಲಿಸಿದ್ದರು. ಮಕ್ಕಳು ಶಾಲಾ ಶಿಕ್ಷಣಕ್ಕೆ ಸಿದ್ಧರಾಗಿದ್ದರೂ, ವಯೋಮಿತಿ ನಿಯಮದಿಂದ ಪ್ರವೇಶ ಸಿಗದೇ ಆತಂಕ ಎದುರಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಹೀಗಾಗಿ, ಕಳೆದ ಶೈಕ್ಷಣಿಕ ವರ್ಷದಲ್ಲಿ ಅನುಸರಿಸಿದ್ದ ಮಾದರಿಯಂತೆ ಈ ಬಾರಿಯೂ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ವಿಶೇಷವಾಗಿ 5 ವರ್ಷ 5 ತಿಂಗಳು ವಯಸ್ಸು ಹೊಂದಿರುವ ಮಕ್ಕಳಿಗೂ ಮೊದಲನೇ ತರಗತಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯದ ಮುಂದೆ ಬೇಡಿಕೆ ಇಡಲಾಗಿದೆ.
ಇನ್ನೊಂದೆಡೆ ಸರ್ಕಾರದ ಪರ ವಾದ ಮಂಡಿಸಿದ ಸರ್ಕಾರಿ ವಕೀಲರು, ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ತಿಳಿಸಿದರು. ಈ ಸಂಬಂಧ ಅಗತ್ಯ ಸಮಯ ನೀಡಿದರೆ, ವಯೋಮಿತಿ ಸಡಿಲಿಕೆ ಕುರಿತು ಪರಿಶೀಲನೆ ನಡೆಸಿ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ವಿಚಾರಣೆ ಅಂತ್ಯದಲ್ಲಿ ಹೈಕೋರ್ಟ್, ವಿದ್ಯಾರ್ಥಿಗಳ ಭವಿಷ್ಯ ಮತ್ತು ಪೋಷಕರ ಆತಂಕ ಎರಡನ್ನೂ ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿತು. ಇದೀಗ ಸರ್ಕಾರ ಯಾವ ರೀತಿಯ ಆದೇಶ ಹೊರಡಿಸುತ್ತದೆ ಎಂಬುದರ ಮೇಲೆ ಲಕ್ಷಾಂತರ ವಿದ್ಯಾರ್ಥಿಗಳ ಮುಂದಿನ ಶಿಕ್ಷಣ ನಿರ್ಧಾರ ಅವಲಂಬಿತವಾಗಿದೆ.

















