ಮನೆ ಸುದ್ದಿ ಜಾಲ ನಮ್ಮೂರ ಶಾಲೆ ನಮ್ಮೂರಲ್ಲೇ ಇರಲಿ”: ಕೆಪಿಎಸ್ ಮ್ಯಾಗ್ನೆಟ್ ಶಾಲೆ ವಿಲೀನಕ್ಕೆ ಗ್ರಾಮಸ್ಥರ ಭಾರೀ ವಿರೋಧ

ನಮ್ಮೂರ ಶಾಲೆ ನಮ್ಮೂರಲ್ಲೇ ಇರಲಿ”: ಕೆಪಿಎಸ್ ಮ್ಯಾಗ್ನೆಟ್ ಶಾಲೆ ವಿಲೀನಕ್ಕೆ ಗ್ರಾಮಸ್ಥರ ಭಾರೀ ವಿರೋಧ

0

ಹಾಸನ: ಕೆಪಿಎಸ್ ಮತ್ತು ಮ್ಯಾಗ್ನೆಟ್ ಶಾಲೆ ಎಂಬ ಹೆಸರಿನಲ್ಲಿ ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕೆರೆಕೋಡಿಹಳ್ಳಿ-ಧನಂಜಯಪುರ ಗ್ರಾಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಸೇರಿ ಬೃಹತ್ ಪ್ರತಿಭಟನಾ ಸಭೆ ನಡೆಸಿದರು. ಸರ್ಕಾರ ಈ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಹಾಗೂ ನಮ್ಮೂರಿನ ಸರ್ಕಾರಿ ಶಾಲೆಯನ್ನು ನಮ್ಮೂರಲ್ಲೇ ಮುಂದುವರಿಸಬೇಕು ಎಂಬುದು ಗ್ರಾಮಸ್ಥರ ಪ್ರಮುಖ ಒತ್ತಾಯವಾಗಿತ್ತು.

ಕೆರೆಕೋಡಿಹಳ್ಳಿ-ಧನಂಜಯಪುರ ಸರ್ಕಾರಿ ಶಾಲೆಯನ್ನು ಜಾವಗಲ್ ಕೆಪಿಎಸ್ ಶಾಲೆಗೆ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. “ನಮ್ಮೂರ ಶಾಲೆ ನಮ್ಮೂರಲ್ಲೇ ಉಳಿಯಲಿ” ಎಂಬ ಘೋಷಣೆಗಳನ್ನು ಕೂಗಿ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಗ್ರಾಮೀಣ ಮಕ್ಕಳ ಶಿಕ್ಷಣವನ್ನು ಹತ್ತಿರದಲ್ಲೇ ಲಭ್ಯವಾಗುವಂತೆ ಇರಿಸಬೇಕು, ಅದನ್ನು ದೂರ ಮಾಡುವ ಯಾವುದೇ ಕ್ರಮವನ್ನು ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರತಿಭಟನಾ ಸಭೆಯನ್ನು ಎಐಡಿಎಸ್ಓ ಜಿಲ್ಲಾಧ್ಯಕ್ಷೆ ಚೈತ್ರ ಅವರು ಉದ್ದೇಶಿಸಿ ಮಾತನಾಡಿದರು. ಕರ್ನಾಟಕದಾದ್ಯಂತ ಕೆಪಿಎಸ್ ಮತ್ತು ಮ್ಯಾಗ್ನೆಟ್ ಶಾಲೆ ಯೋಜನೆಗಳ ವಿರುದ್ಧ ಸಾರ್ವಜನಿಕ ಅಸಮಾಧಾನ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಮೂಲಕ ಶಿಕ್ಷಣವನ್ನು ಜನಸಾಮಾನ್ಯರಿಂದ ದೂರ ಮಾಡುವ ಕೆಲಸ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಕಳೆದ ಐದು ತಿಂಗಳುಗಳಿಂದ ಎಐಡಿಎಸ್ಓ ಸಂಘಟನೆ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳನ್ನು ರಚಿಸಿ ಗ್ರಾಮೀಣ ಶಾಲೆಗಳ ರಕ್ಷಣೆಗೆ ನಿರಂತರ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.

ಅರಸೀಕೆರೆ ತಾಲೂಕಿನ ದೊಡ್ಡಮೇಟಿ ಮತ್ತು ಕುರ್ಕೆ ಭಾಗದ ಪೋಷಕರು ಕೂಡ ನಮಗೆ ಕೆಪಿಎಸ್ ಶಾಲೆ ಬೇಡ, ನಮ್ಮ ಮಕ್ಕಳನ್ನು ಅಲ್ಲಿ ಕಳುಹಿಸುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ಮನವಿ ನೀಡಿದ್ದಾರೆ ಎಂದು ಅವರು ಹೇಳಿದರು. ಆದರೂ ಸರ್ಕಾರ ಜನರ ಅಭಿಪ್ರಾಯವನ್ನು ಕಡೆಗಣಿಸಿ ಶಾಲೆಗಳ ವಿಲೀನ ಪಟ್ಟಿಯನ್ನು ಮುಂದುವರಿಸಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಸರ್ಕಾರದ ಈ ಕ್ರಮವನ್ನು ಜನವಿರೋಧಿ ಮತ್ತು ಕಠಿಣ ನೀತಿ ಎಂದು ಟೀಕಿಸಿದ ಚೈತ್ರ ಅವರು, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಸಮೀಪದಲ್ಲಿರುವ ಸರ್ಕಾರಿ ಶಾಲೆಯೇ ಶಿಕ್ಷಣದ ಮುಖ್ಯ ಆಶ್ರಯವಾಗಿದೆ ಎಂದು ಹೇಳಿದರು. ಆ ಶಾಲೆಯನ್ನೇ ಮುಚ್ಚಿದರೆ ಮಕ್ಕಳ ಶಿಕ್ಷಣಕ್ಕೆ ದೊಡ್ಡ ಹಾನಿಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು. ಹೀಗಾಗಿ ಗ್ರಾಮಸ್ಥರು ಕೊನೆಯವರೆಗೂ ಹೋರಾಟ ಮುಂದುವರೆಸಿ ತಮ್ಮೂರಿನ ಶಾಲೆಯನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಗ್ರಾಮಸ್ಥ ಹಿತೇಂದ್ರ ಅವರು ಮಾತನಾಡಿ, ನಮ್ಮ ಗ್ರಾಮಕ್ಕೆ ಬೆಳಿಗ್ಗೆ ಮತ್ತು ಸಂಜೆ ಒಂದೊಂದು ಬಸ್ ಮಾತ್ರ ಸಂಚಾರ ಮಾಡುತ್ತದೆ ಎಂದು ಹೇಳಿದರು. ಜಾವಗಲ್ ಪ್ರದೇಶಕ್ಕೆ ಹೋಗಲು ಕೆರೆ ಏರಿ ಮೇಲಿನ ಮಾರ್ಗವಾಗಿ ಸಾಗಬೇಕಾಗುತ್ತದೆ ಮತ್ತು ಮಳೆಗಾಲದಲ್ಲಿ ಅದು ಅತ್ಯಂತ ಅಪಾಯಕಾರಿ ಆಗುತ್ತದೆ ಎಂದು ಅವರು ವಿವರಿಸಿದರು. ಇಂತಹ ಪರಿಸ್ಥಿತಿಯಲ್ಲಿ ಚಿಕ್ಕ ಮಕ್ಕಳನ್ನು ಪ್ರತಿದಿನ ದೂರದ ಶಾಲೆಗೆ ಕಳುಹಿಸುವುದು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಈಗಾಗಲೇ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೂ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಸಮಸ್ಯೆ ಎದುರಾಗುತ್ತಿದೆ ಎಂದು ಅವರು ಹೇಳಿದರು. ವರ್ಷಗಳಿಂದ ಮೂಲಭೂತ ಸಾರಿಗೆ ಸೌಲಭ್ಯ ನೀಡದ ಸರ್ಕಾರ ಈಗ ಮಕ್ಕಳನ್ನು ದೂರದ ಶಾಲೆಗೆ ಕಳುಹಿಸುವುದಾಗಿ ಹೇಳುವುದನ್ನು ಹೇಗೆ ನಂಬಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮೂರಿನ ಶಾಲೆಯನ್ನು ಮುಚ್ಚುವ ಬದಲು ಸರ್ಕಾರ ಶಿಕ್ಷಕರ ಕೊರತೆ ನಿವಾರಣೆ ಮಾಡಬೇಕು, ಶಾಲಾ ಕಟ್ಟಡವನ್ನು ಅಭಿವೃದ್ಧಿಪಡಿಸಬೇಕು, ಶೌಚಾಲಯ ಹಾಗೂ ಕುಡಿಯುವ ನೀರಿನಂತಹ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಮಕ್ಕಳ ಭವಿಷ್ಯ ಉಳಿಯಬೇಕಾದರೆ ಶಾಲೆ ಗ್ರಾಮದಲ್ಲೇ ಇರಬೇಕು ಎಂಬುದು ಅವರ ನಿಲುವಾಗಿತ್ತು. ಶಾಲೆ ಮುಚ್ಚುವುದು ಎಂದರೆ ಗ್ರಾಮೀಣ ಮಕ್ಕಳ ಶಿಕ್ಷಣದ ಬಾಗಿಲನ್ನು ಮುಚ್ಚಿದಂತಾಗುತ್ತದೆ ಎಂದು ಅವರು ಹೇಳಿದರು.

ಶಾಲೆಗಳನ್ನು ವಿಲೀನಗೊಳಿಸಿದರೆ ಶಾಲೆಬಿಟ್ಟು ಹೋಗುವ ಮಕ್ಕಳ ಸಂಖ್ಯೆ ಹೆಚ್ಚಾಗುವ ಆತಂಕ ಇದೆ ಎಂದು ಪೋಷಕರು ಅಭಿಪ್ರಾಯಪಟ್ಟರು. ವಿಶೇಷವಾಗಿ ಪ್ರಾಥಮಿಕ ಹಂತದ ಮಕ್ಕಳಿಗೆ ದೂರ ಪ್ರಯಾಣ ಕಷ್ಟಕರವಾಗುತ್ತದೆ ಮತ್ತು ಬಾಲಕಿಯರ ಶಿಕ್ಷಣಕ್ಕೂ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಅವರು ತಿಳಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರು ನಮ್ಮೂರ ಶಾಲೆ ಉಳಿಸಿ, ಗ್ರಾಮೀಣ ಶಿಕ್ಷಣ ಉಳಿಸಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹಿಂಪಡಿ ಎಂಬ ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನೆಯಲ್ಲಿ ಎಐಡಿಎಸ್ಓ ಕಾರ್ಯದರ್ಶಿ ಸುಷ್ಮಾ, ಗ್ರಾಮ ಪಂಚಾಯಿತಿ ಸದಸ್ಯೆ ಕಾವ್ಯ ಹಿತೇಂದ್ರ, ಎಸ್ಡಿಎಂ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಗ್ರಾಮಸ್ಥರಾದ ಗಿರೀಶ್, ಚೇತನ್, ಶರತ್, ತಿಮ್ಮಪ್ಪ, ಲಕ್ಷ್ಮಣ್, ಮಲ್ಲೇಶ್, ಬೀರಣ್ಣ, ದೇವರಾಜು, ವಿಶ್ವನಾಥ್, ಸುನೀಲ್, ಹರೀಶ್, ಗಂಗಾಧರ್ ಸೇರಿದಂತೆ ಹಲವರು ಭಾಗವಹಿಸಿದ್ದರು.