ಮಂಗಳೂರು (Mangalore): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮತ್ತು ಕೊಡಗಿನ ಗಡಿ ಭಾಗಗಳಲ್ಲಿ ಮತ್ತೆ ಭೂಮಿ ಕಂಪಿಸಿದೆ. ಇಂದು ಬೆಳಿಗ್ಗೆ 6.32ರ ವೇಳೆಗೆ ಭಾರಿ ಶಬ್ಧದೊಂದಿಗೆ ಭೂಮಿ ಕಂಪಿಸಿದೆ. ಇದರಿಂದ ಜನರು ಆತಂಕಗೊಂಡಿದ್ದಾರೆ.
ಸಂಪಾಜೆ ಹಾಗೂ ಸಮೀಪದ ಪ್ರದೇಶಗಳಾದ ಅರಂತೋಡು, ತೊಡಿಕಾನ, ಸೇರಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಗಡಿ ಪ್ರದೇಶಗಳಾದ ಚೆಂಬು, ಕಲ್ಲಪಳ್ಳಿ ಭಾಗದಲ್ಲಿ ಭೂ ಕಂಪನದ ಅನುಭವ ಆಗಿರುವ ಬಗ್ಗೆ ಮಾಹಿತಿ ದೊರೆತಿದೆ.
ಜೂ.25 ಮತ್ತು ಜುಲೈ 1 ರ ನಡುವೆ ದಕ್ಷಿಣ ಕನ್ನಡ ಹಾಗೂ ಕೊಡಗಿನ ಗಡಿ ಭಾಗದಲ್ಲಿ ಭಾರಿ ಶಬ್ಧದೊಂದಿಗೆ ಲಘು ಭೂ ಕಂಪನ ಉಂಟಾಗಿತ್ತು. ಇದೀಗ ಭೂಮಿ ಮತ್ತೆ ಕಂಪಿಸಿದ್ದು ಜನರ ಆತಂಕ ಮತ್ತಷ್ಟು ಹೆಚ್ಚಿದೆ.
ಶಿರಾಡಿ ತಪ್ಪಲಲ್ಲಿ ಹೆದ್ದಾರಿ ಬಳಿ ಗುಡ್ಡ ಕುಸಿತ :
ಇನ್ನು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಸಮೀಪದ ಶಿರಾಡಿ ಗುಡ್ಡೆ ಬಳಿ ವಿಪರೀತ ಮಳೆಯ ಪರಿಣಾಮ ಗುಡ್ಡ ಕುಸಿತವಾಗಿದೆ. ಇದರಿಂದ ತಡೆಗೋಡೆ ಮುರಿದು ಬಿದ್ದಿದ್ದು, ಚರಂಡಿ ಹಾಗೂ ರಸ್ತೆ ತುಂಬಾ ಮಣ್ಣು ನಿಂತಿದೆ.
ಚತುಷ್ಪತ ರಸ್ತೆ ಕಾರ್ಯಗಳು ನಡೆಯುತ್ತಿದ್ದು, ತಡೆಗೋಡೆ ಕಾಮಗಾರಿಯು ಕಳಪೆ ಮಟ್ಟದಾಗಿದೆ. ತಡೆಗೋಡೆ ನಿರ್ಮಾಣ ಸಂದರ್ಭ ಯಾವುದೇ ರೀತಿಯ ಕಬ್ಬಿಣದ ಸರಳುಗಳನ್ನು ಬಳಸಿಲ್ಲ ಹಾಗೂ ಕೇವಲ ಕಾಂಕ್ರೀಟ್ ನಿಂದ ನಿರ್ಮಿಸಿದ್ದಾರೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಭಾಗದಲ್ಲಿ ಮತ್ತಷ್ಟು ಮಣ್ಣಿನ ಕುಸಿತವಾಗುತ್ತಿದೆ.