ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ ಅವರು ಶನಿವಾರ ಬೆಳಿಗ್ಗೆ ಚೆನ್ನೈನಲ್ಲಿ ನಿಧನರಾಗಿದ್ದಾರೆ. 85 ವರ್ಷದ ಮೋಹಿನಿ ಮಣಿ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೂರು ವರ್ಷಗಳ ಹಿಂದೆ, 2023ರ ಮಾರ್ಚ್ 24ರಂದು ಅಜಿತ್ ಅವರ ತಂದೆಪಿ. ಸುಬ್ರಮಣ್ಯಂ ಅವರು ಸಹ 85ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಇದೀಗ ತಾಯಿಯ ಅಗಲಿಕೆಯಿಂದ ಅಜಿತ್ ಕುಟುಂಬ ಮತ್ತೊಮ್ಮೆ ದುಃಖಕ್ಕೆ ಒಳಗಾಗಿದೆ.
ಕಾರ್ ರೇಸಿಂಗ್ ಚಟುವಟಿಕೆಗಳ ಹಿನ್ನೆಲೆಯಲ್ಲಿ ದುಬೈನಲ್ಲಿ ಇದ್ದ ಅಜಿತ್ ಕುಮಾರ್ ಅವರಿಗೆ ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರು ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಚೆನ್ನೈನ ಪಾಲವಾಕ್ಕಂನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ.ವರದಿಗಳ ಪ್ರಕಾರ, ತಾಯಿಯ ಆರೋಗ್ಯ ಸ್ಥಿತಿಯ ಹಿನ್ನೆಲೆಯಲ್ಲಿ ಕೊನೆಯ ಬಾರಿ ಮಾತನಾಡಲು ಅಜಿತ್ ಅವರಿಗೆ ಅವಕಾಶ ಸಿಗದೇ ಹೋಗಿರುವುದು ಕುಟುಂಬದ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ.
ಮೋಹಿನಿ ಮಣಿ ಅವರ ನಿಧನಕ್ಕೆ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ನಟ ಹಾಗೂ ರಾಜಕಾರಣಿಕಮಲ್ ಹಾಸನ್, “ಅಜಿತ್ ಕುಮಾರ್ ಅವರ ತಾಯಿ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಈ ದುಃಖದ ಸಮಯದಲ್ಲಿ ಅಜಿತ್ ಮತ್ತು ಅವರ ಕುಟುಂಬದವರಿಗೆ ನನ್ನ ಸಂತಾಪ” ಎಂದು ತಿಳಿಸಿದ್ದಾರೆ. ಹಾಗೆಯೇ ಎಂ.ಕೆ. ಸ್ಟಾಲಿನ್, ಬಿಜೆಪಿ ನಾಯಕ ಕೆ. ಅಣ್ಣಾಮಲೈ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅಜಿತ್ ಕುಮಾರ್ ಕೊನೆಯದಾಗಿ ‘ವಿದುಮುಯಾರ್ಚಿ’ ಹಾಗೂ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಸಿನಿಮಾಗಳ ಜೊತೆಗೆ ಕಾರ್ ರೇಸಿಂಗ್ ಮೇಲೂ ಅಪಾರ ಆಸಕ್ತಿ ಹೊಂದಿರುವ ಅವರು ತಮ್ಮದೇ ರೇಸಿಂಗ್ ತಂಡದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

















