ಬೆಂಗಳೂರು, ಮೇ 30: ಕರ್ನಾಟಕ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬೆಳವಣಿಗೆಯ ನಂತರ ಇದೀಗ ನೂತನ ಸಚಿವ ಸಂಪುಟ ರಚನೆ ಹಾಗೂ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಗಳ ಹಂಚಿಕೆ ವಿಚಾರ ಪಕ್ಷದ ಹೈಕಮಾಂಡ್ಗೆ ಹೊಸ ಸವಾಲಾಗಿ ಪರಿಣಮಿಸಿದೆ. ಆಡಳಿತದಲ್ಲಿ ಸಮುದಾಯಗಳ ಸಮತೋಲನ ಕಾಪಾಡುವ ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಾಲ್ಕು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಕುರಿತು ಎಐಸಿಸಿ ಗಂಭೀರ ಮಟ್ಟದಲ್ಲಿ ಚರ್ಚೆ ನಡೆಸಿದೆ ಎಂದು ತಿಳಿದುಬಂದಿದೆ.
ಆದರೆ ವಿವಿಧ ಸಮುದಾಯಗಳ ಪ್ರಭಾವಿ ನಾಯಕರು ಡಿಸಿಎಂ ಹುದ್ದೆಗಾಗಿ ದೆಹಲಿ ಮಟ್ಟದಲ್ಲಿ ಬಲವಾದ ಪ್ರಯತ್ನ ನಡೆಸುತ್ತಿರುವುದರಿಂದ, ಯಾರಿಗೆ ಅವಕಾಶ ನೀಡಿದರೂ ಅಸಮಾಧಾನ ಉಂಟಾಗುವ ಸಾಧ್ಯತೆ ಹೈಕಮಾಂಡ್ಗೆ ತಲೆನೋವಾಗಿದೆ. ಪಕ್ಷದ ಮೂಲಗಳ ಪ್ರಕಾರ, ಒಬಿಸಿ, ಲಿಂಗಾಯತ, ಮುಸ್ಲಿಂ ಹಾಗೂ ದಲಿತ ಸಮುದಾಯಗಳಿಗೆ ತಲಾ ಒಂದು ಡಿಸಿಎಂ ಹುದ್ದೆ ನೀಡುವ ಪ್ರಸ್ತಾವನೆ ಮುಂದಿದೆ. ಆದರೆ ಪ್ರತಿ ಸಮುದಾಯದಲ್ಲೂ ಒಂದಕ್ಕಿಂತ ಹೆಚ್ಚು ನಾಯಕರು ಸ್ಪರ್ಧೆಯಲ್ಲಿ ಇರುವುದರಿಂದ ಗೊಂದಲ ಹೆಚ್ಚಾಗಿದೆ.
ಒಬಿಸಿ ಕೋಟಾದಲ್ಲಿ ಯತೀಂದ್ರ ಹೆಸರು ಚರ್ಚೆಯಲ್ಲಿ
ಒಬಿಸಿ ಸಮುದಾಯದ ಕೋಟಾದಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೆಸರನ್ನು ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ. ಆದರೆ ಅವರಿಗೆ ಹುದ್ದೆ ನೀಡಿದರೆ ಕುಟುಂಬ ರಾಜಕಾರಣದ ಕುರಿತು ಟೀಕೆಗಳು ವ್ಯಕ್ತವಾಗುವ ಸಾಧ್ಯತೆ ಇರುವುದರಿಂದ ಹೈಕಮಾಂಡ್ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದೆ.
ಲಿಂಗಾಯತ ಕೋಟಾದಲ್ಲಿ ತೀವ್ರ ಪೈಪೋಟಿ
ಲಿಂಗಾಯತ ಸಮುದಾಯದ ಪ್ರತಿನಿಧಿತ್ವಕ್ಕಾಗಿ ಹಿರಿಯ ನಾಯಕ ಎಂ.ಬಿ. ಪಾಟೀಲ್ ಹಾಗೂ ಸಚಿವ ಈಶ್ವರ ಖಂಡ್ರೆ ನಡುವೆ ಪೈಪೋಟಿ ಹೆಚ್ಚಾಗಿದೆ. ಇಬ್ಬರೂ ತಮ್ಮದೇ ಆದ ರಾಜಕೀಯ ಪ್ರಭಾವ ಹೊಂದಿರುವುದರಿಂದ ಅಂತಿಮ ಆಯ್ಕೆ ಸುಲಭವಾಗಿಲ್ಲ.
ಮುಸ್ಲಿಂ ಕೋಟಾದಲ್ಲಿ ಜಮೀರ್-ಖಾದರ್ ಪೈಪೋಟಿ
ಮುಸ್ಲಿಂ ಸಮುದಾಯದ ಕೋಟಾದಡಿ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಬೆಂಬಲ ಇದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೂ ಪ್ರಭಾವಿ ವಲಯಗಳ ಬೆಂಬಲ ದೊರಕಿದ್ದು, ಇಬ್ಬರ ನಡುವೆ ಸ್ಪರ್ಧೆ ತೀವ್ರಗೊಂಡಿದೆ.
ದಲಿತ ಕೋಟಾದಲ್ಲಿ ಪರಮೇಶ್ವರ್-ಪ್ರಿಯಾಂಕ್ ಖರ್ಗೆ ಪೈಪೋಟಿ
ದಲಿತ ಸಮುದಾಯದ ಪ್ರತಿನಿಧಿತ್ವಕ್ಕಾಗಿ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಹೆಸರುಗಳು ಮುಂಚೂಣಿಯಲ್ಲಿವೆ. ಯುವ ನಾಯಕನಾಗಿ ಪ್ರಿಯಾಂಕ್ ಖರ್ಗೆ ಅವರಿಗೆ ಅವಕಾಶ ನೀಡಿದರೆ ಪರಮೇಶ್ವರ್ ಬೆಂಬಲಿಗರಲ್ಲಿ ಅಸಮಾಧಾನ ಮೂಡುವ ಸಾಧ್ಯತೆ ಇದೆ. ಜೊತೆಗೆ ದಲಿತ ಸಮುದಾಯದ ಎಡಗೈ ಮತ್ತು ಬಲಗೈ ಪಂಗಡಗಳ ಸಮೀಕರಣವೂ ಹೈಕಮಾಂಡ್ಗೆ ಪ್ರಮುಖ ವಿಚಾರವಾಗಿದೆ.ಈ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯ ಬಳಿಕ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ. ಹರಿಪ್ರಸಾದ್ ಹೆಸರು ಮುನ್ನೆಲೆ
ಇದರ ನಡುವೆ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕೂಡ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಈವರೆಗೆ ಸತೀಶ್ ಜಾರಕಿಹೊಳಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದ್ದರೂ, ಅವರು ಸಚಿವ ಸ್ಥಾನ ಜೊತೆಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನೂ ಬಯಸಿದ್ದಾರೆ ಎನ್ನಲಾಗಿದೆ. ಕೇವಲ ಅಧ್ಯಕ್ಷ ಸ್ಥಾನ ಮಾತ್ರ ಸ್ವೀಕರಿಸಲು ಅವರು ಆಸಕ್ತಿ ತೋರಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆಯ ನಡುವೆಯೇ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಹೊಸದಾಗಿ ಚರ್ಚೆಗೆ ಬಂದಿದೆ. ಒಬಿಸಿ ಸಮುದಾಯದ ಪ್ರತಿನಿಧಿಯಾಗಿ ಅವರ ಹೆಸರನ್ನು ಪರಿಗಣಿಸಲಾಗುತ್ತಿದ್ದು, ಅವರಿಗೆ ಕೆ.ಸಿ. ವೇಣುಗೋಪಾಲ್ ಅವರ ಬೆಂಬಲವೂ ಇದೆ ಎಂದು ಹೇಳಲಾಗುತ್ತಿದೆ.
ಇಂದು ಸಂಜೆ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಹಿರಿಯ ಶಾಸಕರ ಮೂಲಕ ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ಪ್ರಸ್ತಾಪಿಸಿ ಒಮ್ಮತದ ಅಭ್ಯರ್ಥಿಯಾಗಿ ಘೋಷಿಸಲು ಹೈಕಮಾಂಡ್ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದ್ದು, ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.















