ಮನೆ ಸುದ್ದಿ ಜಾಲ Operation Sindoor 2.0ಗೆ ಭಾರತ ಸಜ್ಜು; ಯಾವುದೇ ಸವಾಲಿಗೆ ತಕ್ಕ ಉತ್ತರ ನೀಡಲು ಸೇನೆ ಸಿದ್ಧ:...

Operation Sindoor 2.0ಗೆ ಭಾರತ ಸಜ್ಜು; ಯಾವುದೇ ಸವಾಲಿಗೆ ತಕ್ಕ ಉತ್ತರ ನೀಡಲು ಸೇನೆ ಸಿದ್ಧ: ಉಪೇಂದ್ರ ದ್ವಿವೇದಿ

0

ನವದೆಹಲಿ, ಮೇ 30: ಭಾರತೀಯ ಸೇನೆ ಯಾವುದೇ ಕ್ಷಣದಲ್ಲೂ ಎದುರಾಗುವ ಸವಾಲುಗಳಿಗೆ ತಕ್ಕ ಪ್ರತಿಕ್ರಿಯೆ ನೀಡಲು ಆಪರೇಷನ್ ಸಿಂಧೂರ್ 2.0’ ಕಾರ್ಯಾಚರಣೆಗೆ ಸಂಪೂರ್ಣ ಸಜ್ಜಾಗಿದೆ ಎಂದು ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ. ಪಹಲ್ಗಾಮ್ ಉಗ್ರ ದಾಳಿಯ ಬಳಿಕ ದೇಶವು ಅಳವಡಿಸಿಕೊಂಡಿರುವ ಕಠಿಣ ಭದ್ರತಾ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥರು, ಆಪರೇಷನ್ ಸಿಂಧೂರ್ ಅಂತ್ಯಗೊಂಡಿಲ್ಲ ಮತ್ತು ಅದರ ಕಾರ್ಯತಂತ್ರದ ಭಾಗಗಳು ಇನ್ನೂ ಮುಂದುವರಿದಿವೆ ಎಂದು ಹೇಳಿದ್ದಾರೆ. ಗಡಿಯಲ್ಲಿ ಪ್ರಸ್ತುತ ಕಂಡುಬರುತ್ತಿರುವ ಪರಿಸ್ಥಿತಿ ಯುದ್ಧದ ಅಂತ್ಯವಲ್ಲ, ಬದಲಾಗಿ ಒಂದು ತಾತ್ಕಾಲಿಕ ವಿರಾಮದ ಹಂತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಯಾವುದೇ ಬೆಳವಣಿಗೆಗಳನ್ನು ಎದುರಿಸಲು ಭಾರತೀಯ ಸೇನೆ ಮಾತ್ರವಲ್ಲದೆ, ಭಾರತೀಯ ವಾಯುಪಡೆ ಮತ್ತು ನೌಕಾಪಡೆಯೂ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿವೆ ಎಂದು ದ್ವಿವೇದಿ ಹೇಳಿದ್ದಾರೆ. ಮೂರೂ ಪಡೆಗಳ ನಡುವೆ ಸಮನ್ವಯತೆ ಹೆಚ್ಚಿಸುವ ಹಾಗೂ ಭವಿಷ್ಯದ ಸವಾಲುಗಳಿಗೆ ಸಿದ್ಧವಾಗುವ ನಿಟ್ಟಿನಲ್ಲಿ ನಿರಂತರ ಕಾರ್ಯ ನಡೆಯುತ್ತಿದೆ ಎಂದರು.

ಆಧುನಿಕ ಯುದ್ಧಭೂಮಿಯಲ್ಲಿ ಪ್ರತಿಯೊಂದು ಚಲನೆಯೂ ಶತ್ರುಗಳ ಗಮನಕ್ಕೆ ಬರುವ ಸಾಧ್ಯತೆ ಇರುವುದರಿಂದ, ಸೈನಿಕರ ಸುರಕ್ಷತೆ, ತಂತ್ರಜ್ಞಾನದ ಬಳಕೆ ಮತ್ತು ಗಡಿ ಪ್ರದೇಶದ ನಾಗರಿಕರ ರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಕಳೆದ ವರ್ಷ ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ ಸಮೀಪದ ಬೈಸರನ್ ಕಣಿವೆಯಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಈ ಘಟನೆಯ ಬಳಿಕ ಭಾರತವು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ ಕಠಿಣ ಕ್ರಮಗಳನ್ನು ಕೈಗೊಂಡಿತ್ತು.

ಅದರ ಮುಂದುವರಿದ ಭಾಗವಾಗಿ, 2025ರ ಮೇ 7 ಮತ್ತು 8ರ ಮಧ್ಯರಾತ್ರಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್’ ಹೆಸರಿನ ವಿಶೇಷ ಕಾರ್ಯಾಚರಣೆ ನಡೆಸಿ ಉಗ್ರರ ನೆಲೆಗಳ ವಿರುದ್ಧ ದಾಳಿ ನಡೆಸಿತ್ತು. ಇದೀಗ ಆ ಕಾರ್ಯಾಚರಣೆಯ ಮುಂದಿನ ಹಂತದ ಸಿದ್ಧತೆಗಳ ಕುರಿತು ಸೇನಾ ಮುಖ್ಯಸ್ಥರ ಹೇಳಿಕೆ ಗಮನ ಸೆಳೆದಿದೆ.