ಮನೆ ಸುದ್ದಿ ಜಾಲ ಐಪಿಎಲ್​ : ಗುಜರಾತ್ ಟೈಟಾನ್ಸ್ ಆಟಗಾರರು ಪ್ರಯಾಣಿಸುತ್ತಿದ್ದ ಬಸ್​ನಲ್ಲಿ ಅಗ್ನಿ ಅವಘಡ

ಐಪಿಎಲ್​ : ಗುಜರಾತ್ ಟೈಟಾನ್ಸ್ ಆಟಗಾರರು ಪ್ರಯಾಣಿಸುತ್ತಿದ್ದ ಬಸ್​ನಲ್ಲಿ ಅಗ್ನಿ ಅವಘಡ

0

ಐಪಿಎಲ್ ಫೈನಲ್‌ನಲ್ಲಿ ಸೋತ ನೋವಿನಲ್ಲಿದ್ದ ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಭಾನುವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಫೈನಲ್ ಪಂದ್ಯ ಮುಗಿಸಿ ಹೋಟೆಲ್‌ಗೆ ಮರಳುತ್ತಿದ್ದಾಗ, ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ವರದಿಗಳ ಪ್ರಕಾರ, ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ, ವಾಹನವು ದಾರಿ ಮಧ್ಯೆಯೇ ನಿಂತುಹೋಗಿದೆ. ಇದರ ಬೆನ್ನಲ್ಲೇ ಬಸ್‌ನೊಳಗೆ ದಟ್ಟ ಹೊಗೆ ಆವರಿಸಿದೆ ಎಂದು ಪಿಟಿಐ ವರದಿ ಮಾಡಿದೆ ಎನ್ನಲಾಗುತ್ತಿದೆ.

ಹೊಗೆಯನ್ನು ಕಂಡ ತಕ್ಷಣ ಆಟಗಾರರು ಮತ್ತು ಸಿಬ್ಬಂದಿ ಆತಂಕಗೊಂಡಿದ್ದಾರೆ. ತಕ್ಷಣವೇ ಎಲ್ಲರನ್ನೂ ಬಸ್‌ನಿಂದ ಕೆಳಗೆ ಇಳಿಸಲಾಗಿದೆ. ಈ ಘಟನೆಯಲ್ಲಿ ಯಾವುದೇ ಆಟಗಾರರಿಗೆ ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ, ಎಲ್ಲರೂ ಸುರಕ್ಷಿತವಾಗಿದ್ದಾರೆ. ಬಸ್‌ನಿಂದ ಇಳಿದ ತಂಡದ ಸದಸ್ಯರು ಸ್ವಲ್ಪ ಸಮಯ ರಸ್ತೆ ಬದಿಯಲ್ಲೇ ಕಾಯಬೇಕಾಯಿತು. ನಂತರ, ಅಧಿಕಾರಿಗಳು ಮತ್ತೊಂದು ಬಸ್ ವ್ಯವಸ್ಥೆ ಮಾಡಿದರು. ಆ ಬಸ್‌ನಲ್ಲಿ ಆಟಗಾರರು ಮತ್ತು ಸಿಬ್ಬಂದಿ ತಮ್ಮ ಹೋಟೆಲ್‌ಗೆ ಪ್ರಯಾಣ ಮುಗಿಸಿದರು. ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐದು ವಿಕೆಟ್‌ಗಳಿಂದ ಸೋಲುಂಡು ನಿರಾಸೆಯಲ್ಲಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಈ ಘಟನೆ ಮತ್ತೊಂದು ಹಿನ್ನಡೆಯಾಗಿ ಪರಿಣಮಿಸಿತು. ಆದರೆ, ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡರೂ ಸಮಯಕ್ಕೆ ಸರಿಯಾಗಿ ಎಲ್ಲರನ್ನೂ ಕೆಳಗಿಳಿಸಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಸದ್ಯ ತಂಡದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಂಡದ ಆಡಳಿತ ಮಂಡಳಿ ಖಚಿತಪಡಿಸಿದೆ ಎಂದು ಮಾಹಿತಿ ತಿಳಿದುಬಂದಿದೆ.