‘ಟೂರಿಸ್ಟ್ ಫ್ಯಾಮಿಲಿ’ ಮತ್ತು ‘ವಿತ್ ಲವ್’ ಚಿತ್ರಗಳ ಮೂಲಕ ಕಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ನಟ-ನಿರ್ದೇಶಕ ಅಭಿಷನ್ ಜೀವಿಂತ್ ಅವರ ಹೊಸ ಚಿತ್ರದಲ್ಲಿ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಈ ಚಿತ್ರವನ್ನು ಅಭಿಷನ್ ಅವರೇ ನಿರ್ದೇಶಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಈಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಅಭಿಷನ್ ಈ ಚಿತ್ರವನ್ನು ನಿರ್ದೇಶಿಸುತ್ತಿಲ್ಲ, ಬದಲಿಗೆ ಶಿವಣ್ಣ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಇವರಿಬ್ಬರು ತಂದೆ-ಮಗನಾಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಸಾಂಪ್ರದಾಯಿಕ ಪೂಜೆಯೊಂದಿಗೆ ಇಂದು (ಜೂನ್ 1) ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಚಿತ್ರತಂಡ ಸಂಪೂರ್ಣ ತಾರಾಗಣವನ್ನು ಅಧಿಕೃತವಾಗಿ ಘೋಷಿಸಿದೆ. ಈ ಚಿತ್ರವನ್ನು ಗೌತಮ್ ಶಿವರಾಮನ್ ನಿರ್ದೇಶಿಸುತ್ತಿದ್ದಾರೆ. ಅವರು ಈ ಹಿಂದೆ ಅಭಿಷನ್ ಜೀವಿಂತ್ ಅವರ ‘ಟೂರಿಸ್ಟ್ ಫ್ಯಾಮಿಲಿ’ ಚಿತ್ರದಲ್ಲಿ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದರು. ‘ಡ್ರಾಮಾ ಕಂಪನಿ’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ಶಿವಾನಿ ನಾಗರಂ ಮತ್ತು ಯೋಗ ಲಕ್ಷ್ಮಿ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ನಟ ಗಾನಾ ವಿನೋದ್ ಕೂಡ ಈ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ. ಲಿಯೋನ್ ಜೇಮ್ಸ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದ ಶಿವರಾಜ್‌ಕುಮಾರ್, ಆ ಬಳಿಕ ಧನುಷ್ ಜೊತೆ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಅಬ್ಬರಿಸಿದ್ದರು. ಸದ್ಯದಲ್ಲೇ ಬರಲಿರುವ ‘ಜೈಲರ್ 2’ ನಂತರ, ಪ್ರಸ್ತುತ ಅನೌನ್ಸ್ ಆಗಿರುವ ಚಿತ್ರವು ಶಿವಣ್ಣ ಅವರ ಪೂರ್ಣ ಪ್ರಮಾಣದ 4ನೇ ತಮಿಳು ಸಿನಿಮಾವಾಗಲಿದೆ. ಸದ್ಯ ಶಿವಣ್ಣ ಭಾರತೀಯ ಚಿತ್ರರಂಗದ ವಿವಿಧ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಾಯಕರಾಗಿ ನಟಿಸಿರುವ, ಬುಚ್ಚಿ ಬಾಬು ಸನಾ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಪೆದ್ದಿ’ ಚಿತ್ರದಲ್ಲಿ ಶಿವಣ್ಣ ಗೌರನಾಯ್ಡು ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ. ಇದರ ಜೊತೆಗೆ ‘ಸತ್ಯ ಜ್ಯೋತಿ ಫಿಲ್ಮ್ಸ್’ ಬ್ಯಾನರ್‌ನಲ್ಲಿ ನಿರ್ದೇಶಕ ಶರವಣನ್ ಅವರ ಸಿನಿಮಾವೂ ಸದ್ಯದಲ್ಲೇ ಸೆಟ್ಟೇರಲಿದೆ ಎಂಬುದ್ದಾಗಿದೆ.
















