ಬೆಂಗಳೂರು: ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಹಾಗೂ ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟು ಮಾಡುವ ಕಾಂಪೌಂಡ್ ಗೋಡೆಗಳು ಮತ್ತು ಅನಧಿಕೃತ ಕಟ್ಟಡಗಳ ವಿರುದ್ಧ ತಕ್ಷಣ ನೋಟಿಸ್ ಜಾರಿ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೂರ್ವ ನಗರ ಪಾಲಿಕೆ (BECC) ಆಯುಕ್ತ ಡಿ. ಎಸ್. ರಮೇಶ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಎಂಜಿನಿಯರಿಂಗ್ ವಿಭಾಗದ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕಟ್ಟಡ ನಿರ್ಮಾಣ ನಿಯಮಗಳನ್ನು ಪಾಲಿಸದ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳು, ಮಳೆನೀರು ಚರಂಡಿಗಳ ಹೂಳೆತ್ತುವಿಕೆ, ಜಂಕ್ಷನ್ ಅಭಿವೃದ್ಧಿ ಯೋಜನೆಗಳು, ರಸ್ತೆ ಪುನಃಸ್ಥಾಪನೆ, ಕಟ್ಟಡ ಸುರಕ್ಷತಾ ಕ್ರಮಗಳು ಹಾಗೂ ಸಹಾಯ ದೂರುಗಳ ವಿಲೇವಾರಿ ಸೇರಿದಂತೆ ಹಲವು ವಿಷಯಗಳ ಕುರಿತು ಪರಿಶೀಲನೆ ನಡೆಸಲಾಯಿತು.
ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ನಾಗರಿಕ ಕಾಮಗಾರಿಗಳು ಪೂರ್ಣಗೊಂಡಿರುವ ರಸ್ತೆಗಳಲ್ಲಿ ಜೂನ್ 9ರೊಳಗೆ ಡಾಂಬರೀಕರಣ ಕಾಮಗಾರಿ ಪೂರ್ಣಗೊಳಿಸುವಂತೆ ಕಾರ್ಯನಿರ್ವಾಹಕ ಎಂಜಿನಿಯರ್ ಗಳಿಗೆ ಸೂಚನೆ ನೀಡಲಾಗಿದೆ. ಉಳಿದಿರುವ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆಯೂ ನಿರ್ದೇಶಿಸಲಾಗಿದೆ.
ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಯಲ್ಲಿರುವ ಸುರಕ್ಷಾ-75 ಯೋಜನೆಯಡಿ ಕೈಗೊಳ್ಳಲಿರುವ ಜಂಕ್ಷನ್ ಅಭಿವೃದ್ಧಿ ಕಾಮಗಾರಿಗಳ ವಿನ್ಯಾಸವನ್ನು ಶೀಘ್ರ ಅಂತಿಮಗೊಳಿಸಿ, ಕಾಮಗಾರಿ ಆರಂಭಿಸುವಂತೆ ಮುಖ್ಯ ಎಂಜಿನಿಯರ್ ಅವರಿಗೆ ಸೂಚಿಸಲಾಗಿದೆ.

ಮಳೆಗಾಲದ ಹಿನ್ನೆಲೆ ಕಾಂಕ್ರೀಟ್ ಹಾಗೂ ಮಣ್ಣಿನ ಮಳೆನೀರು ಚರಂಡಿಗಳ ಹೂಳೆತ್ತುವಿಕೆ ಮತ್ತು ನಿರ್ವಹಣಾ ಕಾರ್ಯಗಳನ್ನು ತುರ್ತು ಆದ್ಯತೆಯಲ್ಲಿ ಕೈಗೊಳ್ಳುವಂತೆ ಆಯುಕ್ತರು ಆದೇಶಿಸಿದ್ದಾರೆ. ಚರಂಡಿಗಳಲ್ಲಿ ಸಂಗ್ರಹವಾಗಿರುವ ಹೂಳು, ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಿ, ಮಳೆನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ನಗರ ಸಂಚಾರ ಪೊಲೀಸರು ಗುರುತಿಸಿರುವ ನೀರು ನಿಲ್ಲುವ ಪ್ರದೇಶಗಳಿಗೆ ವಿಶೇಷ ಆದ್ಯತೆ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲದಂತೆ ಹಾಗೂ ವಾಹನ ಸಂಚಾರ ಸುಗಮವಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಇದೇ ವೇಳೆ, ಗುಂಡಿ ಬಿದ್ದಿರುವ ರಸ್ತೆಗಳನ್ನು ದುರಸ್ತಿ ಮಾಡಲು ಸಮಗ್ರ ಕಾರ್ಯಯೋಜನೆ ರೂಪಿಸುವಂತೆ ಆಯುಕ್ತರು ಸೂಚಿಸಿದ್ದು, ಕಾಮಗಾರಿಗಳನ್ನು ಶೀಘ್ರ ಆರಂಭಿಸಲು ಅಗತ್ಯ ಟೆಂಡರ್ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.













