ಮನೆ ಸುದ್ದಿ ಜಾಲ ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಬಿ. ನಾಗೇಂದ್ರಗೆ ಮತ್ತೊಂದು ಸಂಕಷ್ಟ, ಸಿಬಿಐ ಚಾರ್ಜ್ ಶೀಟ್...

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಬಿ. ನಾಗೇಂದ್ರಗೆ ಮತ್ತೊಂದು ಸಂಕಷ್ಟ, ಸಿಬಿಐ ಚಾರ್ಜ್ ಶೀಟ್ ನಲ್ಲಿ ಸ್ಫೋಟಕ ಮಾಹಿತಿ

0

ಬೆಂಗಳೂರು (ಜೂನ್ 4): ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಪ್ರಕರಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮಾಜಿ ಸಚಿವ ಬಿ. ನಾಗೇಂದ್ರ ಸೇರಿದಂತೆ ಒಟ್ಟು 30 ಮಂದಿಯ ಪಾತ್ರವಿದೆ ಎಂದು ಆರೋಪಿಸಲಾಗಿದೆ.

ಸಿಬಿಐ ತನಿಖೆಯ ಪ್ರಕಾರ, ಬಿ. ನಾಗೇಂದ್ರ ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಿಗೆ ಸುಮಾರು 1.20 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ನ್ಯಾಯಾಲಯಕ್ಕೆ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಹಲವು ಮಹತ್ವದ ಅಂಶಗಳನ್ನು ಉಲ್ಲೇಖಿಸಲಾಗಿದೆ.

ಮೂರು ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಕೆ

ವಾಲ್ಮೀಕಿ ನಿಗಮ ಹಗರಣದ ತನಿಖೆಯನ್ನು ಪೂರ್ಣಗೊಳಿಸಿರುವ ಸಿಬಿಐ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಚಾರ್ಜ್ ಶೀಟ್ ಗಳನ್ನು ಸಲ್ಲಿಸಿದೆ. ಈ ಮೂರು ಆರೋಪಪಟ್ಟಿಗಳಲ್ಲೂ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಆರೋಪಿಯನ್ನಾಗಿ ಸೇರಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ತನಿಖೆಯಲ್ಲಿ ಬೆಳಕಿಗೆ ಬಂದ ಮತ್ತಷ್ಟು ವಂಚನೆ

ತನಿಖೆಯ ವೇಳೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕೆಜಿಟಿಟಿಐ ಸಂಸ್ಥೆಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಈ ಎರಡು ಸಂಸ್ಥೆಗಳಿಗೆ ಸಂಬಂಧಿಸಿದ ವಂಚನೆ ಪ್ರಕರಣಗಳ ತನಿಖೆಯನ್ನು ವಿಸ್ತರಿಸುವಂತೆ ನ್ಯಾಯಾಲಯವು 2025ರ ಜುಲೈ 1ರಂದು ಆದೇಶ ನೀಡಿತ್ತು.

ನಕಲಿ ದಾಖಲೆ ಬಳಸಿ ಕೋಟಿ ಕೋಟಿ ರೂಪಾಯಿ ವರ್ಗಾವಣೆ

ಸಿಬಿಐ ತನಿಖೆಯ ಪ್ರಕಾರ, ಬಿ. ನಾಗೇಂದ್ರ, ಅವರ ಆಪ್ತ ಸಹಚರ ನೆಕ್ಕಂಟಿ ನಾಗರಾಜ್ ಹಾಗೂ ಕೆಎಂವಿಎಸ್ಟಿಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಜೆ. ಜಿ. ಸಂಚು ರೂಪಿಸಿದ್ದರೆಂದು ಆರೋಪಿಸಲಾಗಿದೆ.

ಹೈದರಾಬಾದ್ ಮೂಲದ ಸತ್ಯನಾರಾಯಣ ವರ್ಮಾ ಎಂಬಾತ ಈ ಹಿಂದೆ ಛತ್ತೀಸ್ ಗಢದಲ್ಲಿ ಅನುಸರಿಸಿದ್ದ ಮಾದರಿಯಲ್ಲೇ ನಕಲಿ ದಾಖಲೆಗಳನ್ನು ಬಳಸಿ 18 ಬೋಗಸ್ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾನೆ ಎನ್ನಲಾಗಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಕೌಂಟ್ಸ್ ಅಧಿಕಾರಿ ಅವರ ನಕಲಿ ಸಹಿ ಹಾಗೂ ರಬ್ಬರ್ ಸ್ಟಾಂಪ್ ಗಳನ್ನು ಬಳಸಿ, ನಿಗಮದ ಖಾತೆಯಲ್ಲಿದ್ದ 187 ಕೋಟಿ ರೂಪಾಯಿಗಳ ಪೈಕಿ 89.63 ಕೋಟಿ ರೂಪಾಯಿಗಳನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಬೇನಾಮಿ ಕಾರು ಖರೀದಿ ಆರೋಪ

ನಕಲಿ ಚೆಕ್ ಗಳು ಮತ್ತು ಆರ್ ಟಿ ಜಿ ಎಸ್ ವಹಿವಾಟುಗಳ ಮೂಲಕ ವರ್ಗಾವಣೆಯಾದ 89.63 ಕೋಟಿ ರೂಪಾಯಿಗಳನ್ನು ಸುಮಾರು 600 ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗಿದೆ ಎಂದು ಸಿಬಿಐ ತಿಳಿಸಿದೆ. ಈ ಹಣದ ಒಂದು ಭಾಗವನ್ನು ಬಳಸಿಕೊಂಡು ಆರೋಪಿಗಳು ಕಾರುಗಳನ್ನು ಖರೀದಿಸಿದ್ದಾರೆ ಎನ್ನಲಾಗಿದೆ.

ಕೆಎಂವಿಎಸ್ಟಿಡಿಸಿಎಲ್ ನಿಂದ ವರ್ಗಾವಣೆಯಾದ ಹಣದ ಮೂಲಕ ಬಿ. ನಾಗೇಂದ್ರ ಅವರ ಹೆಸರಿನಲ್ಲಿ ಬೇನಾಮಿ ಕಾರು ಖರೀದಿಸಲಾಗಿದೆ ಎಂಬ ಆರೋಪವೂ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಅಕ್ರಮವಾಗಿ ಪಡೆದ ಹಣವನ್ನು ನೆಕ್ಕಂಟಿ ನಾಗರಾಜ್ ಮತ್ತು ಅವರ ಸಂಬಂಧಿಕರು ಪಡೆದಿದ್ದಾರೆ ಎಂದು ಸಿಬಿಐ ವರದಿಯಲ್ಲಿ ತಿಳಿಸಲಾಗಿದೆ.

ಟೆಂಡರ್ ಪ್ರಕ್ರಿಯೆಯಲ್ಲೂ ಅಕ್ರಮ ಆರೋಪ

ಸ್ಮಾರ್ಟ್ ಕಂಪ್ಯೂಟರ್ ಲ್ಯಾಬ್ ಹಾಗೂ ರೊಟ್ಟಿ ತಯಾರಿಸುವ ಯಂತ್ರಗಳ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲೂ ಅಕ್ರಮ ನಡೆದಿದೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಟೆಂಡರ್ ಪಡೆದ ವ್ಯಕ್ತಿ ಸುಮಾರು 1.20 ಕೋಟಿ ರೂಪಾಯಿಗಳನ್ನು ಬಿ. ನಾಗೇಂದ್ರ ಅವರ ಸಹೋದರಿ, ಭಾವ, ವೈಯಕ್ತಿಕ ಸಹಾಯಕ ಹಾಗೂ ಬಳ್ಳಾರಿಯ ಫಾರ್ಮ್ ಹೌಸ್ ಮಾಲೀಕರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾನೆ ಎಂದು ಸಿಬಿಐ ಆರೋಪಿಸಿದೆ.