ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರವೇಶಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಬಹು ಮಾಧ್ಯಮ ವರದಿಗಳ ಪ್ರಕಾರ, ನಟ ಈ ವರ್ಷದ ಜುಲೈನಲ್ಲಿ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮದುವೆಯಾಗಲಿದ್ದಾರೆ. ವರದಿಗಳು ನಿಜವಾದ್ರೆ, ಇದು ಅವರಿಗೆ ಮೂರನೇ ವಿವಾಹವಾಗಲಿದ್ದು ಅಮೀರ್ ಖಾನ್ ಅಥವಾ ಗೌರಿ ಸ್ಪ್ರಾಟ್ ಈ ಸುದ್ದಿಯನ್ನು ಅಧಿಕೃತವಾಗಿ ದೃಢಪಡಿಸದಿದ್ದರೂ, ಮನರಂಜನಾ ಸುದ್ದಿ ಸಂಸ್ಥೆಗಳು ಉಲ್ಲೇಖಿಸಿದ ಮೂಲಗಳ ಪ್ರಕಾರ, ಜುಲೈ 5 ಪ್ರೇಮಪಕ್ಷಿಗಳು ಆತ್ಮೀಯ ವಿವಾಹ ಸಮಾರಂಭದಲ್ಲಿ ಅಧಿಕೃತವಾಗಿ ವೈವಾಹಿಕ ಬಂಧನಕ್ಕೊಳಗಾಗಲಿದ್ದಾರೆ. ವರದಿಗಳ ಪ್ರಕಾರ, ಅಮೀರ್ ಮತ್ತು ಗೌರಿ ಈ ಸಂದರ್ಭವನ್ನು ಬಹಳ ಸರಳ ಮತ್ತು ವೈಯಕ್ತಿಕವಾಗಿಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್ ಶೈಲಿಯ ಅದ್ಧೂರಿ ಆಚರಣೆಯ ಬದಲು, ನಿಕಟ ಕುಟುಂಬ ಸದಸ್ಯರು ಮತ್ತು ಕೆಲ ವಿಶ್ವಾಸಾರ್ಹ ಸ್ನೇಹಿತರ ಸಮ್ಮುಖದಲ್ಲಿ ಮನೆಯಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅದ್ಧೂರಿ ವಿವಾಹ ಅಥವಾ ಸಿನಿ ತಾರೆಯರ ಕೂಟದ ಯಾವುದೇ ಪ್ಲಾನ್ಸ್ ಇಲ್ಲ ಎಂದು ವರದಿಗಳು ಸೂಚಿಸಿವೆ. ಪ್ರೀತಿಪಾತ್ರರೊಂದಿಗೆ ಖಾಸಗಿಯಾಗಿ ಈ ಸುಂದರ ಕ್ಷಣವನ್ನು ಆಚರಿಸಲು ಅವರು ಮುಂದಾಗಿದ್ದಾರೆ. ಮಾಧ್ಯಮವೊಂದಕ್ಕೆ ಮೂಲವೊಂದು ಮಾಹಿತಿ ನೀಡಿದ್ದು, ಜೋಡಿ ಈಗಾಗಲೇ ಒಂದು ವರ್ಷಕ್ಕೂ ಹೆಚ್ಚು ಕಾಲ ಕುಟುಂಬದಂತೆ ಒಟ್ಟಿಗೆ ವಾಸಿಸುತ್ತಿದ್ದಾರೆ. ಒಟ್ಟಿಗೆ ಸ್ಥಿರ ಮತ್ತು ಸಂತೋಷದ ಜೀವನವನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅವರ ಕುಟುಂಬಗಳ ಆಶೀರ್ವಾದದೊಂದಿಗೆ ತಮ್ಮ ಸಂಬಂಧವನ್ನು ಔಪಚಾರಿಕಗೊಳಿಸುವುದು ಮುಂದಿನ ಹೆಜ್ಜೆ ಎಂದು ವರದಿಯಾಗಿದೆ. ಕಳೆದ ವರ್ಷ (2025) ಮಾರ್ಚ್‌ನಲ್ಲಿ ತಮ್ಮ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್, ಗೌರಿ ಸ್ಪ್ರಾಟ್ ಅವರನ್ನು ಮೊದಲ ಬಾರಿಗೆ ಮಾಧ್ಯಮಗಳಿಗೆ ಪರಿಚಯಿಸಿದರು. ಪತ್ರಕರ್ತರೊಂದಿಗಿನ ಅನೌಪಚಾರಿಕ ಸಂವಾದದ ಸಂದರ್ಭ, ತಾನು ಮತ್ತೆ ಪ್ರೀತಿ ಕಂಡುಕೊಂಡಿದ್ದೇನೆ ಎಂದು ಬಹಿರಂಗಪಡಿಸುವ ಮೂಲಕ ಅನೇಕರನ್ನು ಅಚ್ಚರಿಗೊಳಿಸಿದರು.

ಆ ಸಮಯದಲ್ಲಿ, ಅಮೀರ್ ಮತ್ತು ಗೌರಿ ಸುಮಾರು 25 ವರ್ಷಗಳಿಂದ ಪರಸ್ಪರ ಪರಿಚಿತರು ಎಂಬುದನ್ನು ಹಂಚಿಕೊಂಡರು. ದೀರ್ಘ ಸ್ನೇಹದ ಹೊರತಾಗಿಯೂ, ಪ್ರೀತಿ-ಪ್ರೇಮ ಶುರುವಾಗಿದ್ದು ಇತ್ತೀಚೆಗಷ್ಟೇ ಎಂಬುದನ್ನು ಒಪ್ಪಿಕೊಂಡರು. ಈ ವರ್ಷದ ಆರಂಭದಲ್ಲಿ, ಅಮೀರ್ ಸಂದರ್ಶನವೊಂದರಲ್ಲಿ ಗೌರಿ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದರು. ಅವರನ್ನು ತಮ್ಮ ಜೀವನದಲ್ಲಿ ಹೊಂದಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದರು. ನಟ ಗೌರಿಯನ್ನು ತಮಗೆ ಶಾಂತಿ ಮತ್ತು ಸಂತೋಷ ತರುವ ವ್ಯಕ್ತಿ ಎಂದು ಬಣ್ಣಿಸಿದ್ದರು. ರೀನಾ ದತ್ತಾ ಮತ್ತು ಕಿರಣ್ ರಾವ್ ಅವರೊಂದಿಗಿನ ತಮ್ಮ ಹಿಂದಿನ ವಿವಾಹಗಳು ಅಂತಿಮವಾಗಿ ಕೊನೆಗೊಂಡಿದ್ದರೂ ಸಹ, ಅವು ಅರ್ಥಪೂರ್ಣ ಸಂಬಂಧಗಳಾಗಿದ್ದವು ಎಂದು ಕೂಡಾ ನಟ ಒಪ್ಪಿಕೊಂಡರು. ಮತ್ತೆ ಪ್ರೀತಿಯನ್ನು ಕಂಡುಕೊಂಡಿದ್ದಕ್ಕೆ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ ಮತ್ತು ಪ್ರಸ್ತುತ ಜೀವನದ ಸಂತೋಷದ ಹಂತದಲ್ಲಿದ್ದೇನೆ ಎಂದು ಅಮೀರ್ ಹೇಳಿಕೊಂಡಿದ್ದಾರೆಂದು ಮಾಹಿತಿ ತಿಳಿದುಬಂದಿದೆ.













