ಮನೆ ಸುದ್ದಿ ಜಾಲ ಮುಖ್ಯಮಂತ್ರಿ ಸಚಿವಾಲಯದ ಸ್ಥಳನಿಯುಕ್ತ ಸಿಬ್ಬಂದಿ ಕಾರ್ಯಮುಕ್ತ- ಸರ್ಕಾರದಿಂದ ಅಧಿಕೃತ ಆದೇಶ

ಮುಖ್ಯಮಂತ್ರಿ ಸಚಿವಾಲಯದ ಸ್ಥಳನಿಯುಕ್ತ ಸಿಬ್ಬಂದಿ ಕಾರ್ಯಮುಕ್ತ- ಸರ್ಕಾರದಿಂದ ಅಧಿಕೃತ ಆದೇಶ

0

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಿ ಸಚಿವ ಸಂಪುಟ ವಿಸರ್ಜನೆಯಾದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಚಿವಾಲಯ, ಮುಖ್ಯಮಂತ್ರಿಗಳ ಸಲಹೆಗಾರರ ಆಪ್ತ ಶಾಖೆ ಹಾಗೂ ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳ ಕಚೇರಿಗಳಲ್ಲಿ ಸ್ಥಳನಿಯುಕ್ತಿ, ನಿಯೋಜನೆ, ಒಪ್ಪಂದ ಮತ್ತು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಕರ್ನಾಟಕ ಸರ್ಕಾರ ಕಾರ್ಯಮುಕ್ತಗೊಳಿಸಲು  ಆದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, ಅನುಬಂಧದಲ್ಲಿ ಉಲ್ಲೇಖಿಸಿರುವ ಅಧಿಕಾರಿ ಹಾಗೂ ನೌಕರರನ್ನು 2026ರ ಮೇ 29ರಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡಲಾಗಿದೆ.

ಕಾರ್ಯಮುಕ್ತಗೊಂಡ ಸಿಬ್ಬಂದಿ ತಮ್ಮ ವಶದಲ್ಲಿರುವ ಎಲ್ಲಾ ಭೌತಿಕ ಮತ್ತು ಇ-ಆಫೀಸ್ ಕಡತಗಳು, ಕಚೇರಿ ಸಾಮಗ್ರಿಗಳು, ಗಣಕಯಂತ್ರಗಳು, ಪೀಠೋಪಕರಣಗಳು, ಗುರುತಿನ ಚೀಟಿ ಹಾಗೂ ವಾಹನ ಪಾಸ್‌ಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಂತಿರುಗಿಸಬೇಕೆಂದು ಸೂಚಿಸಲಾಗಿದೆ.

ಯಾವುದೇ ಕಡತ, ದಾಖಲೆ ಅಥವಾ ಸರ್ಕಾರಿ ಸಾಮಗ್ರಿಗಳು ಕಳೆದುಹೋದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಪರಿಗಣಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರಕ್ಕೆ ಸಿಬ್ಬಂದಿಯಿಂದ ಯಾವುದೇ ಬಾಕಿ ಇದ್ದಲ್ಲಿ, ಅದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಲೆಕ್ಕಪತ್ರ ವಿಭಾಗವು ವಸೂಲಿ ಮಾಡಲಿದೆ.

ಇದೇ ವೇಳೆ, ಹಿಂದಿನ ಸರ್ಕಾರದ ಆದೇಶದಂತೆ, ಮುಖ್ಯಮಂತ್ರಿ ಅಥವಾ ಸಚಿವರ ರಾಜೀನಾಮೆ ಹಿನ್ನೆಲೆಯಲ್ಲಿ ಕಾರ್ಯಾಲಯ ಮುಕ್ತಾಯಗೊಂಡ ಬಳಿಕವೂ ಅಲ್ಲಿನ ಸಿಬ್ಬಂದಿಗೆ ಮುಂದಿನ 7 ದಿನಗಳವರೆಗೆ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿದ್ದು, ಹಾಜರಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಆ ಅವಧಿಯ ವೇತನವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.