ಮನೆ ಅಂತರಾಷ್ಟ್ರೀಯ ಶ್ರೀಲಂಕಾದಲ್ಲಿ ಸರ್ವಪಕ್ಷ ಮಧ್ಯಂತರ ಸರ್ಕಾರ ರಚನೆಗೆ ಒಪ್ಪಿಗೆ

ಶ್ರೀಲಂಕಾದಲ್ಲಿ ಸರ್ವಪಕ್ಷ ಮಧ್ಯಂತರ ಸರ್ಕಾರ ರಚನೆಗೆ ಒಪ್ಪಿಗೆ

0

ಕೊಲಂಬೊ (Colombo): ಶ್ರೀಲಂಕಾದಲ್ಲಿ ಸರ್ವಪಕ್ಷ ಮಧ್ಯಂತರ ಸರ್ಕಾರ ರಚಿಸಲು ಅಲ್ಲಿನ ಪ್ರಮುಖ ವಿರೋಧ ಪಕ್ಷಗಳು ನಿರ್ಧರಿಸಿವೆ.

ಎಲ್ಲ ಪಕ್ಷಗಳಿಗೂ ಪ್ರಾತಿನಿಧ್ಯ ಇರುವ ಮಧ್ಯಂತರ ಸರ್ಕಾರ ರಚಿಸಲು ತಾತ್ವಿಕವಾಗಿ ನಾವು ಸಮ್ಮತಿಸಿದ್ದೇವೆ ಎಂದು ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನ ಪಕ್ಷದಿಂದ ಸಿಡಿದು ಬೇರೆಯಾಗಿರುವ ಬಣದ ನಾಯಕ ವಿಮಲ್‌ ವೀರವಂಶ ಹೇಳಿದ್ದಾರೆ.

ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಬಗ್ಗೆ ಜನರಲ್ಲಿ ಭಾರಿ ಆಕ್ರೋಶ ಸೃಷ್ಟಿಯಾಗಿದೆ. ಹಾಗಾಗಿ, ಗೊಟಬಯ ಅವರು ಬುಧವಾರ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಈಗ ದೇಶದ ಮುಂದೆ ಇರುವ ಆರ್ಥಿಕ ಬಿಕ್ಕಟ್ಟು ಮತ್ತು ಗೊಟಬಯ ರಾಜೀನಾಮೆಯಿಂದ ಸೃಷ್ಟಿಯಾಗುವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂಬ ಕುರಿತು ಚರ್ಚಿಸಲು ವಿರೋಧ ಪಕ್ಷಗಳ ಮುಖಂಡರು ಸಭೆ ನಡೆಸಿದ್ದರು.

ರಾಜಪಕ್ಸ ಅವರ ರಾಜೀನಾಮೆಯವರೆಗೆ ಕಾಯುವ ಅಗತ್ಯವೇನೂ ಇಲ್ಲ ಎಂದು ಇದೇ ಬಣದ ಇನ್ನೊಬ್ಬ ನಾಯಕ ವಾಸುದೇವ ನನಯಕ್ಕರ ಹೇಳಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡುವುದಾಗಿ ಸಂಸತ್ತಿನ ಸ್ಪೀಕರ್‌ ಮಹಿಂದಾ ಯಪ ಅಭಯವರ್ಧನ ಅವರಿಗೆ ಗೊಟಬಯ ಅವರು ತಿಳಿಸಿದ್ದಾರೆ. ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರೂ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಬಯಸಿವೆ ಎಂದು ಸ್ಪೀಕರ್ ಅವರು ಗೊಟಬಯ ಅವರಿಗೆ ತಿಳಿಸಿದ್ದರು.

ರಾಜಕೀಯ ಪಕ್ಷಗಳ ಮುಖಂಡರು ಸೋಮವಾರ ಸಭೆ ಸೇರಿ, ಸಂಸತ್‌ ಅಧಿವೇಶನ ನಡೆಸುವುದು ಮತ್ತು ರಾಜಪಕ್ಸ ಅವರಿಂದ ಅಧಿಕಾರ ಹಸ್ತಾಂತರ ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.