ನಾರ್ವೆ ಚೆಸ್ 2026: 9ನೇ ಸುತ್ತಿನ ನಾರ್ವೆ ಚೆಸ್ ಪಂದ್ಯದಲ್ಲಿ ಆರ್. ಪ್ರಜ್ಞಾನಂದ, ಡಿ. ಗುಕೇಶ್ ಅವರನ್ನು ಸೋಲಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಸ್ಪರ್ಧಿಯಾಗಿದ್ದು, 15 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ, ವೆಸ್ಲಿ ಸೋ (15.5) ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ, ಅಲಿರೆಜಾ ಫಿರೋಜ್ಜಾ (14.5) ಮೂರನೇ ಸ್ಥಾನದಲ್ಲಿದ್ದಾರೆ. ಟೂರ್ನಿ ಉದ್ದಕ್ಕೂ ಅಸಾಧಾರಣ ಪ್ರದರ್ಶನ ನೀಡಿರುವ ಪ್ರಜ್ಞಾ ಎದುರಾಳಿಗಳನ್ನು ಮಣಿಸಿದ್ದು ಇದೀಗ ಒಂಬತ್ತನೇ ಸುತ್ತಿನಲ್ಲಿ ಅವರು ಗುಕೇಶ್ ಅವರನ್ನು ಸಹ ಮಣಿಸಿದ್ದಾರೆ, ಈ ಹಿಂದೆ ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ಧ ಗೆಲುವು ಸಾಧಿಸಿದ್ದ ಅವರು ಒಂಬತ್ತನೇ ಸುತ್ತಿನ ಅಂತ್ಯದ ವೇಳೆಗೆ, 15 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಏರಿದ್ದರು. ಗಮನಾರ್ಹವಾಗಿ, ನಾಯಕ ವೆಸ್ಲಿ ಸೋ (15.5 ಅಂಕಗಳು) ಕೇವಲ ಅರ್ಧ ಅಂಕಗಳಿಂದ ಮುಂದಿದ್ದಾರೆ. ವೆಸ್ಲಿ ಸೋತರೆ ಮತ್ತು ಅಂತಿಮ ಸುತ್ತಿನಲ್ಲಿ ಪ್ರಜ್ಞಾನಂದ ಗೆದ್ದರೆ, ಅವರು ಪ್ರಶಸ್ತಿಯನ್ನು ಗೆಲ್ಲುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹಾಗೂ ಇಂದಿನ ಅಂತಿಮ ಸುತ್ತಿನಲ್ಲಿ, ಪ್ರಜ್ಞಾನಂದ ವಿನ್ಸೆಂಟ್ ಅವರನ್ನು ಎದುರಿಸಲಿದ್ದಾರೆ. ಮತ್ತೊಂದೆಡೆ ವೆಸ್ಲಿ, ಅಲಿರೆಜಾ ಅವರನ್ನು ಎದುರಿಸಲಿದ್ದಾರೆ. ಏತನ್ಮಧ್ಯೆ ಇತ್ತೀಚೆಗೆ ನಡೆದ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ನಲ್ಲಿ ಪ್ರಗ್ನಾನಂದ ದಯನೀಯವಾಗಿ ವಿಫಲರಾಗಿದ್ದರು, ಆದರೆ ನಾರ್ವೆ ಚೆಸ್‌ನಲ್ಲಿ ಬಲಿಷ್ಠ ಪುನರಾಗಮನ ಮಾಡಿದ್ದು ಅವರು ಪ್ರಶಸ್ತಿ ಗೆದ್ದು ಹಿಂದಿನ ಸೋಲುಗಳನ್ನು ಮರೆಯುವ ಗುರಿಯನ್ನು ಹೊಂದಿದ್ದಾರೆ. ಏತನ್ಮಧ್ಯೆ ಇದಕ್ಕೂ ಮುನ್ನ ಮಂಗಳವಾರ ಅವರು ವಿಶ್ವದ ನಂ. 1 ಮತ್ತು ಹಾಲಿ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ ಸತತ ಎರಡನೇ ಬಾರಿಗೆ ಮಣಿಸಿದ್ದರು. ಗುಕೇಶ್ ವಿರುದ್ಧದ ಗೆಲುವಿನ ನಂತರ, ಪ್ರಜ್ಞಾನಂದ ನಾರ್ವೆ ಚೆಸ್‌ನ ಅಧಿಕೃತ ಪ್ರಸಾರದೊಂದಿಗೆ ಮಾತನಾಡುತ್ತಾ ಖುಷಿಯನ್ನು ವ್ಯಕ್ತಪಡಿಸಿದರು. “ಈ ಆಟದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ, ಏಕೆಂದರೆ ನಾನು ಸಾಮಾನ್ಯವಾಗಿ ಅವನ ಮುಂದೆ ಸೋಲುತ್ತೇನೆ.

ಆದರೆ ಅವನು ಆಟದಲ್ಲಿ ಕೆಲವೊಮ್ಮೆ ವಿಚಿತ್ರವಾದ ನಡೆ ಆಯ್ಕೆ ಮಾಡಿಕೊಳ್ಳುತ್ತಾನೆ. ಇಂತಹ ಸಮಯದಲ್ಲಿ ನಾನು ಅತಿಯಾಗಿ ಯೋಚಿಸಿ ಸೋಲನ್ನು ಕಾಣುತ್ತಿದ್ದೆ. ಆದರೆ, ಈ ಬಾರಿ ನಾನು ನನ್ನ ಸಮಯವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದೇನೆ ಮತ್ತು ನಾನು ಚೆನ್ನಾಗಿ ಲೆಕ್ಕಾಚಾರ ಮಾಡುತ್ತಿದ್ದೇ ಎಂದು ಭಾವಿಸಿದೆ. ಆದ್ದರಿಂದ ಇದು ಒಟ್ಟಾರೆಯಾಗಿ ಉತ್ತಮ ಆಟ ಎಂದು ನಾನು ಭಾವಿಸಿದೆ ಎಂದು ತಿಳಿಸಿದ್ದಾರೆ. ಏತನ್ಮಧ್ಯೆ, ನಾರ್ವೆ ಚೆಸ್ ಪಂದ್ಯಾವಳಿಯ ಮಹಿಳಾ ವಿಭಾಗದಲ್ಲಿ ಪ್ರಶಸ್ತಿಗಾಗಿ ಯಾವುದೇ ಭಾರತೀಯ ಆಟಗಾರ್ತಿ ಸ್ಪರ್ಧೆಯಲ್ಲಿ ಉಳಿದಿಲ್ಲ. ದಿವ್ಯಾ ದೇಶಮುಖ್ ಐದನೇ ಸ್ಥಾನ ಮತ್ತು ಕೊನೆರು ಹಂಪಿ ಆರನೇ ಸ್ಥಾನ ಪಡೆದರು. ಕಝಾಕಿಸ್ತಾನದ ಬಿಬಿಸಾರ ಅಸ್ಸೌಬಯೇವಾ 16.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಝು ಜಿನರ್ 13 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದರೂ, ಅಂತರವು ಹೆಚ್ಚಿರುವ ಕಾರಣ, ಅಂತಿಮ ಸುತ್ತಿನ ಫಲಿತಾಂಶವನ್ನು ಲೆಕ್ಕಿಸದೆ ಬಿಬಿಸಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.















