ಮನೆ ಸುದ್ದಿ ಜಾಲ ಹೂಡಿಕೆ ಕುರಿತು ಸಭೆ : ಜರ್ಮನಿ ನಿಯೋಗದ ಜೊತೆ ಸಿಎಂ ಡಿಕೆ ಶಿವಕುಮಾರ್, ಸಚಿವ ಎಂಬಿ...

ಹೂಡಿಕೆ ಕುರಿತು ಸಭೆ : ಜರ್ಮನಿ ನಿಯೋಗದ ಜೊತೆ ಸಿಎಂ ಡಿಕೆ ಶಿವಕುಮಾರ್, ಸಚಿವ ಎಂಬಿ ಪಾಟೀಲ್

0

ಬೆಂಗಳೂರುಪರಸ್ಪರ ಆರ್ಥಿಕ ಸಹಕಾರ ಬಲವರ್ಧನೆಯ ಉದ್ದೇಶದಿಂದ ಆಗಮಿಸಿರುವ ಜರ್ಮನಿಯ ತುರಿಂಜಿಯಾ ಪ್ರಾಂತ್ಯದ ಮಂತ್ರಿಮಂಡಲದ ಮುಖ್ಯಸ್ಥ ಮಾರಿಯೋ ವಾಯ್ಟ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜೊತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ ಇಲ್ಲಿನ ಖಾಸಗಿ ಹೋಟೆಲ್​ನಲ್ಲಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ‌.ಪಾಟೀಲ್ ಕೂಡ ಇದ್ದರು. “ಎರಡೂ ಕಡೆಯವರಿಗೂ ಇರುವ ಅತ್ಯುತ್ತಮ ಅವಕಾಶಗಳನ್ನು ಗುರುತಿಸಲು ನಾವು ಪರಸ್ಪರ ನಿಕಟವಾಗಿ ಕೆಲಸ ಮಾಡಲಿದ್ದೇವೆ. ಇದರಲ್ಲಿ ಜಂಟಿ ಸಹಭಾಗಿತ್ವ, ತಂತ್ರಜ್ಞಾನ ವರ್ಗಾವಣೆ, ಕೌಶಲ್ಯ ಮತ್ತು ಪ್ರತಿಭಾ ವಿನಿಮಯ ಮುಂತಾದವು ಸೇರಿವೆ ಎನ್ನಲಾಗಿದೆ.

ಹಾಗೂ ಈ ನಿಟ್ಟಿನಲ್ಲಿ ಕರ್ನಾಟಕ ಮತ್ತು ತುರಿಂಜಿಯಾ ಪ್ರಾಂತೀಯ ಸರ್ಕಾರಗಳು ಜೊತೆಗೂಡಿ ನಾವೀನ್ಯತೆ ಮತ್ತು ಮುಂದಿನ ತಲೆಮಾರಿನ ತಂತ್ರಜ್ಞಾನಗಳತ್ತ ಗಮನ ಹರಿಸಲಿವೆ” ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ನಿಯೋಗವನ್ನು ಬರಮಾಡಿಕೊಂಡ ಸಚಿವ ಎಂ.ಬಿ.ಪಾಟೀಲ ಮಾತನಾಡಿ, “ಕರ್ನಾಟಕ ಮತ್ತು ತುರಿಂಜಿಯಾ ನಡುವೆ ಆಪ್ಟಿಕ್ಸ್ ಮತ್ತು ಫೋಟಾನಿಕ್ಸ್, ಸೆಮಿಕಂಡಕ್ಟರ್, ಬಯೋಟೆಕ್, ವಿದ್ಯುಚ್ಚಾಲಿತ ವಾಹನ ತಯಾರಿಕೆ, ಮರುಬಳಕೆ ಇಂಧನ, ಆಧುನಿಕ ತಯಾರಿಕಾ ಕ್ಷೇತ್ರಗಳಲ್ಲಿ ಉಜ್ವಲ ಅವಕಾಶಗಳಿವೆ. ಆದ್ದರಿಂದ ತುರಿಂಜಿಯಾ ಪ್ರಾಂತ್ಯದ ಕಂಪನಿಗಳು ರಾಜ್ಯದಲ್ಲಿ ಈ ವಲಯಗಳಲ್ಲಿ ಹೆಚ್ಚಾಗಿ ಹೂಡಿಕೆ ಮಾಡಬೇಕು. ನಮ್ಮ ಕೈಗಾರಿಕಾ ನೀತಿಯಲ್ಲೂ ಈ ಕ್ಷೇತ್ರಗಳಿಗೆ ಒತ್ತು ಕೊಡಲಾಗಿದೆ” ಎಂದು ತಿಳಿಸಿದರು. “ರಾಜ್ಯದ ಎಲ್ಲಾ ಕಡೆಗಳಲ್ಲೂ ಕೈಗಾರಿಕೆಗಳು ನೆಲೆಯೂರಬೇಕು ಎನ್ನುವುದು ಸರ್ಕಾರದ ಒತ್ತಾಸೆ. ನಾವು ಈಗ ಸೇವಾವಲಯದಿಂದ ಉತ್ಪಾದನಾ ವಲಯದತ್ತ ಬದಲಾಗುತ್ತಿದ್ದೇವೆ. ತುರಿಂಜಿಯಾ ಪ್ರಾಂತ್ಯದ ಕಂಪನಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ಅವರು ಅಭಿಪ್ರಾಯಪಟ್ಟರು. ಇದಕ್ಕೆ ಸ್ಪಂದಿಸಿದ ಮಾರಿಯೋ ವಾಯ್ಟ್ ಅವರು, ರಾಜ್ಯದಲ್ಲಿರುವ ಆರ್&ಡಿ ಕಾರ್ಯಪರಿಸರ, ಡಿಜಿಟಲ್ ಪ್ರತಿಭಾ ಸಂಪನ್ಮೂಲ, ಎಂಜಿನಿಯರಿಂಗ್, ವಿಶ್ವ ದರ್ಜೆಯ ನವೋದ್ಯಮ ಕಾರ್ಯ ಪರಿಸರ, ಕ್ವಾಂಟಂ ತಂತ್ರಜ್ಞಾನ, ಏರೋಸ್ಪೇಸ್ ವಲಯಗಳಲ್ಲಿ ಇರುವ ಮೂಲಸೌಕರ್ಯ ಇತ್ಯಾದಿಗಳನ್ನು ಪ್ರಶಂಸಿಸಿದರು.

ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಉಪಸ್ಥಿತರಿದ್ದರು. ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದ ಬೆಂಗಳೂರು ಮೂಲದ ಆ್ಯಕ್ಸಿಸ್‌ಕೇಡ್ಸ್‌ ಏರೊಸ್ಪೇಸ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ ರಾಜ್ಯದಲ್ಲಿ ₹6,000 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಮುಂದೆ ಬಂದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕಳೆದ ತಿಂಗಳು ತಿಳಿಸಿದ್ದರು. 200 ಎಕರೆ ಪ್ರದೇಶದಲ್ಲಿ ವೈಮಾಂತರಿಕ್ಷ, ರಕ್ಷಣೆ, ಸೆಮಿಕಂಡಕ್ಟರ್‌ ಹಾಗೂ ಕೃತಕ ಬುದ್ಧಿಮತ್ತೆ ನಾವೀನ್ಯತೆ ಕ್ಷೇತ್ರಗಳಲ್ಲಿ ಉತ್ಪಾದನೆ, ಪರೀಕ್ಷೆ ಮತ್ತು ನಿರ್ವಹಣೆಯ ಸಮಗ್ರ ಕೇಂದ್ರ ಸ್ಥಾಪಿಸುವುದು ಆ್ಯಕ್ಸಿಸ್‌ಕೇಡ್ಸ್‌ ಏರೊಸ್ಪೇಸ್‌ನ ಮುಖ್ಯ ಉದ್ದೇಶ. ಕಂಪನಿ ಜಾಗತಿಕ ಪಾಲುದಾರಿಕೆಯಡಿ ದೇಶೀಯವಾಗಿ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನೂ ಸ್ಥಾಪಿಸಲಿದೆ ಎಂಬುದ್ದಾಗಿದೆ.