ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ನಿರಂತರವಾಗಿ ಅತ್ಯಧಿಕ ಅವಧಿಗೆ ಅಧಿಕಾರ ನಡೆಸಿದ ಪ್ರಧಾನಿಯಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ 4,398 ದಿನಗಳ ದಾಖಲೆಯನ್ನು ಹಿಂದಿಕ್ಕಿ, 4,399 ದಿನಗಳ ನಿರಂತರ ಆಡಳಿತದ ಮೈಲಿಗಲ್ಲು ತಲುಪಿದ್ದಾರೆ.
2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ನರೇಂದ್ರ ಮೋದಿ ಅವರು, ಇಂದಿಗೆ 4,399 ದಿನಗಳ ನಿರಂತರ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ.

ಇದರೊಂದಿಗೆ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಗೆ ಸೇವೆ ಸಲ್ಲಿಸಿದ ಪ್ರಧಾನಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಕಳೆದ 64 ವರ್ಷಗಳಿಂದ ಅಚಲವಾಗಿ ಉಳಿದಿದ್ದ ದಾಖಲೆಯನ್ನು ಅವರು ಮುರಿದಿದ್ದಾರೆ.
ಜವಾಹರಲಾಲ್ ನೆಹರು ಅವರು 4,398 ದಿನಗಳ ಕಾಲ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಸ್ವಾತಂತ್ರ್ಯಾನಂತರ ಹೊಸ ರಾಷ್ಟ್ರ ನಿರ್ಮಾಣ, ವಿವಿಧ ಸಂಸ್ಥಾನಗಳನ್ನು ಒಗ್ಗೂಡಿಸುವುದು ಹಾಗೂ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸುವ ಸವಾಲುಗಳನ್ನು ನೆಹರು ಎದುರಿಸಿದ್ದರೆ, ಆಧುನಿಕ ಯುಗದಲ್ಲಿ ಭಾರತದ ಆರ್ಥಿಕ, ಆಡಳಿತಾತ್ಮಕ ಹಾಗೂ ರಾಜತಾಂತ್ರಿಕ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಸವಾಲುಗಳನ್ನು ಮೋದಿ ಎದುರಿಸುತ್ತಿದ್ದಾರೆ.
ಶತಮಾನಗಳ ವಸಾಹತುಶಾಹಿ ಆಡಳಿತದ ಬಳಿಕ ರಾಜಕೀಯ ಸ್ಥಿರತೆ ಕಾಪಾಡುವುದು, ನವಭಾರತದ ನಿರ್ಮಾಣ ಹಾಗೂ ಬಡತನ ನಿವಾರಣೆಯಂತಹ ಮಹತ್ವದ ಜವಾಬ್ದಾರಿಗಳನ್ನು ಹೊತ್ತು ಸ್ವತಂತ್ರ ಭಾರತದ ಪಥವನ್ನು ನೆಹರು ರೂಪಿಸಿದ್ದರು.

ಇತ್ತ ಪ್ರಧಾನಿ ಮೋದಿ ಅವರು ಜಾಗತಿಕ ಆರ್ಥಿಕತೆಯೊಂದಿಗೆ ನಿಕಟವಾಗಿ ಸಂಪರ್ಕ ಹೊಂದಿರುವ, ರಾಜಕೀಯವಾಗಿ ಹೆಚ್ಚು ಸ್ಪರ್ಧಾತ್ಮಕ ಹಾಗೂ ಅಂತರರಾಷ್ಟ್ರೀಯ ಬೆಳವಣಿಗೆಗಳ ಪ್ರಭಾವಕ್ಕೆ ಒಳಪಡುವ ಭಾರತವನ್ನು ಮುನ್ನಡೆಸುತ್ತಿದ್ದಾರೆ.
ನರೇಂದ್ರ ಮೋದಿ ಅವರ 4,399 ದಿನಗಳ ಆಡಳಿತವು ಕೇವಲ ಅಂಕಿ ಅಂಶಕ್ಕೆ ಸೀಮಿತವಾಗಿಲ್ಲ. ಅದು ದೇಶದ ಜನರು ವ್ಯಕ್ತಪಡಿಸಿರುವ ವಿಶ್ವಾಸದ ಪ್ರತೀಕವಾಗಿ ಪರಿಗಣಿಸಲಾಗುತ್ತಿದೆ. 2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣದ ಗುರಿಯೊಂದಿಗೆ ಮುಂದುವರಿಯುತ್ತಿರುವ ಅವರ ಆಡಳಿತಕ್ಕೆ ಈ ಸಾಧನೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.
















