ಮನೆ ಸುದ್ದಿ ಜಾಲ ಸೂಪರ್ ಸಿಎಂ ರೀತಿಯಲ್ಲಿ ನಡೆದುಕೊಳ್ಳಬೇಡಿ: ಗೃಹ ಸಚಿವರಿಗೆ ಕೋಟಾ ಶ್ರೀನಿವಾಸ ಪೂಜಾರಿ ನೀತಿ ಪಾಠ

ಸೂಪರ್ ಸಿಎಂ ರೀತಿಯಲ್ಲಿ ನಡೆದುಕೊಳ್ಳಬೇಡಿ: ಗೃಹ ಸಚಿವರಿಗೆ ಕೋಟಾ ಶ್ರೀನಿವಾಸ ಪೂಜಾರಿ ನೀತಿ ಪಾಠ

0

 ನವದೆಹಲಿ: ಆರ್‌ಎಸ್‌ಎಸ್ ಕುರಿತು ಟೀಕೆ ಮಾಡುವುದಕ್ಕಿಂತ ರಾಜ್ಯದಲ್ಲಿ ಡ್ರಗ್ಸ್ ನಿಯಂತ್ರಣ, ಭಯೋತ್ಪಾದನೆ ತಡೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರಗಳಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಂಗಳವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆರ್‌ಎಸ್‌ಎಸ್ ಪಾಕಿಸ್ತಾನಕ್ಕೆ ಜೈಕಾರ ಹಾಕುವ ಸಂಘಟನೆಯಲ್ಲ. ಈ ವಿಚಾರವನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ ಎಂಬ ನಂಬಿಕೆ ಇದೆ. ಆರ್‌ಎಸ್‌ಎಸ್ ಕೇವಲ ಕರ್ನಾಟಕ ಅಥವಾ ಭಾರತಕ್ಕೆ ಸೀಮಿತವಾಗಿಲ್ಲ. ವಿಶ್ವದ ಸುಮಾರು 50 ರಾಷ್ಟ್ರಗಳಲ್ಲಿ ಅದರ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ” ಎಂದು ಹೇಳಿದರು.

ಆರ್‌ಎಸ್‌ಎಸ್ ನೋಂದಣಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈ ವಿಚಾರವಾಗಿ ಸಂಘದ ಹಿರಿಯರು ಈಗಾಗಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದಕ್ಕೆ ನಾವು ಪ್ರತ್ಯೇಕವಾಗಿ ಉತ್ತರಿಸುವ ಅಗತ್ಯವಿಲ್ಲ. ಸಂಘವೇ ಅದಕ್ಕೆ ಸೂಕ್ತ ಉತ್ತರ ನೀಡಲಿದೆ” ಎಂದರು.

ಮುಂದುವರಿದು ಮಾತನಾಡಿದ ಅವರು, “ಹಿಂದೆ ಜವಾಹರಲಾಲ್ ನೆಹರು ಅವರು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ್ದರು. ಬಳಿಕ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದರು. ಇಂದಿರಾ ಗಾಂಧಿ ಅವರೂ ನಿಷೇಧಿಸಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ” ಎಂದು ಹೇಳಿದರು.

ರಾಜ್ಯದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, “ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಗೃಹ ಸಚಿವರು ಅವುಗಳ ಕಡೆಗೆ ಗಮನ ಹರಿಸಬೇಕು. ಅದನ್ನು ಬಿಟ್ಟು ಸೂಪರ್ ಸಿಎಂ ರೀತಿಯಲ್ಲಿ ವರ್ತಿಸುವ ಅಗತ್ಯವಿಲ್ಲ” ಎಂದು ಸಲಹೆ ನೀಡಿದರು.