ಮನೆ ಸುದ್ದಿ ಜಾಲ ಶಾಲಾ ಕಟ್ಟಡದಿಂದ ಬಿದ್ದು 15 ವರ್ಷದ ವಿದ್ಯಾರ್ಥಿ ಸಾವು; ಸಾವಿನ ಕಾರಣದ ಬಗ್ಗೆ ಅನುಮಾನ

ಶಾಲಾ ಕಟ್ಟಡದಿಂದ ಬಿದ್ದು 15 ವರ್ಷದ ವಿದ್ಯಾರ್ಥಿ ಸಾವು; ಸಾವಿನ ಕಾರಣದ ಬಗ್ಗೆ ಅನುಮಾನ

0

ಬೀದರ್, ಜೂನ್ 10: ಬೀದರ್‌ನ ಎಲ್‌ಐಸಿ ಕಾಲೋನಿಯಲ್ಲಿರುವ ಜನಸೇವಾ ಖಾಸಗಿ ಶಾಲೆಯ ಕಟ್ಟಡದಿಂದ ಬಿದ್ದು 15 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಶಾಂತಿನಗರ ನಿವಾಸಿ ಸಮೀರ್ ಮೃತ ವಿದ್ಯಾರ್ಥಿಯಾಗಿದ್ದು, ಆತ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಮೃತ ಬಾಲಕನ ಕುಟುಂಬಸ್ಥರು, ಶಾಲಾ ಸಿಬ್ಬಂದಿಯ ಕಿರುಕುಳದಿಂದಲೇ ಸಮೀರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಅನುಮತಿ ಪಡೆಯದೇ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಲೆಯಲ್ಲಿ ತನ್ನಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಸಮೀರ್ ಮನೆಯವರ ಬಳಿ ಈ ಹಿಂದೆ ಹೇಳಿಕೊಂಡಿದ್ದ ಎಂದು ಕುಟುಂಬದವರು ದೂರಿದ್ದಾರೆ.

ಇನ್ನೊಂದೆಡೆ, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ವಿದ್ಯಾರ್ಥಿಗೆ ಓದಿನ ಬಗ್ಗೆ ಗಮನಹರಿಸುವಂತೆ ಮಾತ್ರ ಸೂಚಿಸಲಾಗಿತ್ತು. ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿನ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.