ಮನೆ ಸುದ್ದಿ ಜಾಲ ಕೇಂದ್ರ ವಿತ್ತ ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್ ಮನವಿ‌ : ಹೆಚ್ಚಿನ ಅನುದಾನ ನೀಡಿ

ಕೇಂದ್ರ ವಿತ್ತ ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್ ಮನವಿ‌ : ಹೆಚ್ಚಿನ ಅನುದಾನ ನೀಡಿ

0

ದೆಹಲಿ/ಬೆಂಗಳೂರುಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶಗಳು ಹಾಗೂ ಗ್ರಾಮೀಣ ಭಾಗದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಅಗತ್ಯ ಅನುದಾನ ಹಾಗೂ ಸಹಕಾರ ನೀಡಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವರ ಕಚೇರಿಗೆ ಭೇಟಿ ನೀಡಿದ ಶಿವಕುಮಾರ್ ಅವರು ರಾಜ್ಯಕ್ಕೆ ಕೇಂದ್ರದಿಂದ ಅಗತ್ಯವಿರುವ ಸಹಕಾರದ ಬಗ್ಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಕರ್ನಾಟಕ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ನಗರ ಮೂಲಸೌಕರ್ಯ, ನೀರಾವರಿ ಮತ್ತು ರಸ್ತೆ ಜಾಲಗಳಲ್ಲಿ ಹೆಚ್ಚಿನ ಆದ್ಯತೆಯ ಅಭಿವೃದ್ಧಿಗಳನ್ನು ವೇಗಗೊಳಿಸಲು SASCI ನ ಮುಕ್ತ ಘಟಕದ ಅಡಿಯಲ್ಲಿ ಹೆಚ್ಚುವರಿ ರೂ. 5,000 ಕೋಟಿಯನ್ನು ನೀಡಬೇಕು. ರಾಜ್ಯ ಸರ್ಕಾರವು ದೇಶದ ಪ್ರಮುಖ ಆರ್ಥಿಕ ಇಂಜಿನ್‌ಗಳಲ್ಲಿ ಒಂದಾದ ನಮ್ಮ ರಾಜಧಾನಿ ನಗರದಲ್ಲಿ ಮೂಲಸೌಕರ್ಯ ಕೊರತೆಗಳನ್ನು ನೀಗಿಸುವ ಉದ್ದೇಶದಿಂದ ಮಹತ್ವಾಕಾಂಕ್ಷೆಯ “ಬ್ರ್ಯಾಂಡ್ ಬೆಂಗಳೂರು” ಬೃಹತ್ ಯೋಜನೆಯನ್ನು (master plan) ಪ್ರಾರಂಭಿಸಿದೆ. ಈ ವೇಗವನ್ನು ಕಾಯ್ದುಕೊಳ್ಳಲು, UIDF ಅಡಿಯಲ್ಲಿ ಕರ್ನಾಟಕದ ಪ್ರಮಾಣಕ ಹಂಚಿಕೆಯನ್ನು (normative allocation) ಹೆಚ್ಚುವರಿ ರೂ. 5,000 ಕೋಟಿಗೆ ಹೆಚ್ಚಿಸಬೇಕು ಎನ್ನಲಾಗಿದೆ.

ಹಾಗೂ 2025-26ರ ಆರ್ಥಿಕ ವರ್ಷದಲ್ಲಿ, ಗ್ರಾಮೀಣ ರಸ್ತೆಗಳು, ಸೇತುವೆಗಳು ಮತ್ತು ನೀರಾವರಿ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವ ಮೂಲಕ ರಾಜ್ಯವು ತನ್ನ ರೂ. 2,000 ಕೋಟಿ RIDF ಹಂಚಿಕೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿದೆ. ಗ್ರಾಮೀಣ ಮೂಲಸೌಕರ್ಯಗಳಿಗೆ ಭಾರಿ ಬೇಡಿಕೆಯಿರುವುದರಿಂದ, ಕರ್ನಾಟಕವು 2026-27ರ ಆರ್ಥಿಕ ವರ್ಷಕ್ಕೆ ರೂ. 3,500 ಕೋಟಿ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದರ ಜೊತೆಗೆ 2023-24ರ ಕೇಂದ್ರ ಬಜೆಟ್‌ನಲ್ಲಿ ಭರವಸೆ ನೀಡಲಾದ ರೂ. 5,300 ಕೋಟಿಯ ಕೇಂದ್ರ ನೆರವು ಇನ್ನೂ ಬಿಡುಗಡೆಯಾಗಿಲ್ಲ.

ಅತ್ಯಂತ ಪ್ರಮುಖ ಕುಡಿಯುವ ನೀರಿನ ಯೋಜನೆಯು ಪ್ರಸ್ತುತ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಅರಣ್ಯ ಮಂಜೂರಾತಿಗಾಗಿ ಕಾಯುತ್ತಾ ಸ್ಥಗಿತಗೊಂಡಿದೆ. ಈ ಸಮತೋಲನ ಜಲಾಶಯ ಯೋಜನೆಗೆ ಅಂತಿಮ ಶಾಸನಬದ್ಧ ಅರಣ್ಯ ಮಂಜೂರಾತಿಯು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ಇನ್ನೂ ಬಾಕಿ ಉಳಿದಿದೆ. ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-II (KWDT-II) ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಅನುಮೋದಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ವಿನಂತಿಸಿದ್ದಾರೆ ಎಂದು ತಿಳಿದುಬಂದಿದೆ.