ಮನೆ ಸುದ್ದಿ ಜಾಲ ಪಿಯುಸಿ ಹಾಗೂ ಸಿಇಟಿ ವಿದ್ಯಾರ್ಥಿಗಳಿಗೆ ಕೆಇಎ ಬಿಗ್ ರಿಲೀಫ್: ಇನ್ಮುಂದೆ ‘ಒಂದು ಅರ್ಜಿ, ಎರಡು ಪರೀಕ್ಷೆ’;...

ಪಿಯುಸಿ ಹಾಗೂ ಸಿಇಟಿ ವಿದ್ಯಾರ್ಥಿಗಳಿಗೆ ಕೆಇಎ ಬಿಗ್ ರಿಲೀಫ್: ಇನ್ಮುಂದೆ ‘ಒಂದು ಅರ್ಜಿ, ಎರಡು ಪರೀಕ್ಷೆ’; ಸಾಲು ಸಾಲು ಎಡವಟ್ಟುಗಳಿಗೆ ಬ್ರೇಕ್

0

ಬೆಂಗಳೂರು, ಜೂನ್ 13: ದ್ವಿತೀಯ ಪಿಯುಸಿ ಹಾಗೂ ಸಿಇಟಿ (UG-CET) ಪರೀಕ್ಷೆ ಬರೆಯುವ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಸಿಹಿ ಸುದ್ದಿ ನೀಡಿದೆ. ಪ್ರತಿ ವರ್ಷ ಸಿಇಟಿ ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಸರ್ವರ್ ಸಮಸ್ಯೆ, ಮಾಹಿತಿ ದಾಖಲಿಸುವಲ್ಲಿ ಆಗುವ ತಪ್ಪುಗಳು ಸೇರಿದಂತೆ ವಿವಿಧ ತೊಂದರೆಗಳನ್ನು ಎದುರಿಸುತ್ತಿದ್ದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ಇನ್ಮುಂದೆ ಪಿಯುಸಿ ಹಾಗೂ ಸಿಇಟಿ ಎರಡಕ್ಕೂ ಒಂದೇ ಅರ್ಜಿ ಸಲ್ಲಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಕೆಇಎ ಮುಂದಾಗಿದೆ.

ವಿದ್ಯಾರ್ಥಿಗಳಿಗೆ ಸಿಇಟಿ ಕುರಿತ ಸಮಗ್ರ ಮಾಹಿತಿ ಒದಗಿಸಿ, ಅರ್ಜಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜಂಟಿಯಾಗಿ ಈ ಯೋಜನೆ ರೂಪಿಸಿವೆ.

ಹೊಸ ನಿಯಮದ ಪ್ರಕಾರ, ಮುಂಬರುವ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ (UG-CET)ಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ. ಬದಲಾಗಿ, ದ್ವಿತೀಯ ಪಿಯುಸಿಗೆ ಪ್ರವೇಶ ಪಡೆಯುವ ವೇಳೆ ಭರ್ತಿ ಮಾಡುವ ಅರ್ಜಿಯಲ್ಲೇ ಸಿಇಟಿ ಆಯ್ಕೆಯನ್ನು ನಮೂದಿಸಲು ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲಿಯೇ ನಿಗದಿತ ಶುಲ್ಕ ಪಾವತಿಸಿದ ಬಳಿಕ ನೇರವಾಗಿ ಪ್ರವೇಶ ಪತ್ರ ಪಡೆಯುವ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.

ಸಾಮಾನ್ಯವಾಗಿ ದ್ವಿತೀಯ ಪಿಯುಸಿ ಪರೀಕ್ಷೆಯ ಸಿದ್ಧತೆಯ ಒತ್ತಡದ ನಡುವೆ ಅನೇಕ ವಿದ್ಯಾರ್ಥಿಗಳು ಸಿಇಟಿಗೆ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಲು ವಿಫಲರಾಗುತ್ತಿದ್ದರು. ಜೊತೆಗೆ ಸೈಬರ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಹೆಸರು, ಜಾತಿ ಪ್ರಮಾಣಪತ್ರ, ಆರ್‌ಡಿ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳಲ್ಲಿ ತಪ್ಪುಗಳು ದಾಖಲಾಗುತ್ತಿದ್ದು, ಕೌನ್ಸಿಲಿಂಗ್ ವೇಳೆಯಲ್ಲಿ ವಿದ್ಯಾರ್ಥಿಗಳು ಪರದಾಡುವಂತಾಗುತ್ತಿತ್ತು.

ಆದರೆ, ವಿದ್ಯಾರ್ಥಿಗಳು ಪಿಯುಸಿಗೆ ಪ್ರವೇಶ ಪಡೆಯುವಾಗ ಕಾಲೇಜು ಪ್ರಾಂಶುಪಾಲರ ಉಸ್ತುವಾರಿಯಲ್ಲಿ ಸಂಪೂರ್ಣ ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸುವುದರಿಂದ ಇಂತಹ ತಪ್ಪುಗಳಿಗೆ ಅವಕಾಶ ಇರುವುದಿಲ್ಲ. ಈ ಕಾರಣದಿಂದ ಪಿಯುಸಿ ಅರ್ಜಿಯನ್ನೇ ಸಿಇಟಿ ಅರ್ಜಿಯಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ, ಇದರಿಂದ ವಿದ್ಯಾರ್ಥಿಗಳ ಸಮಯ ಉಳಿತಾಯವಾಗಲಿದ್ದು, ಅರ್ಜಿ ಪ್ರಕ್ರಿಯೆಯಲ್ಲಿನ ಗೊಂದಲಗಳು ಕಡಿಮೆಯಾಗಲಿವೆ. ಜೊತೆಗೆ ಮಾನಸಿಕ ಒತ್ತಡವೂ ನಿವಾರಣೆಯಾಗಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ಶೇಕಡಾ 85 ಕ್ಕೂ ಹೆಚ್ಚು ಮಂದಿ ರಾಜ್ಯ ಪಠ್ಯಕ್ರಮದ ಹಿನ್ನೆಲೆಯವರಾಗಿದ್ದಾರೆ. ಹೀಗಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ರೂಪಿಸಲಾಗುತ್ತಿರುವ ಈ ಸಂಯೋಜಿತ ಅರ್ಜಿ ವ್ಯವಸ್ಥೆಯು ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿರೀಕ್ಷೆ ಇದೆ. ವಿದ್ಯಾರ್ಥಿ ಸ್ನೇಹಿ ಕ್ರಮವೆಂದು ಪರಿಗಣಿಸಲಾಗುತ್ತಿರುವ ಈ ಹೊಸ ವ್ಯವಸ್ಥೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.