ವಾಷಿಂಗ್ಟನ್: ಹಾರ್ಮುಜ್ ಜಲಸಂಧಿ ಸಮೀಪ ಭಾರತೀಯ ಹಡಗಿನ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಆರೋಪಿಸಿದ್ದು, ಈ ಕೃತ್ಯವು “ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದಾರೆ.
“ಹಾರ್ಮುಜ್ ಜಲಸಂಧಿಯನ್ನು ತೊರೆಯುತ್ತಿದ್ದ ಭಾರತೀಯ ಹಡಗುಗಳ ವಿರುದ್ಧ ನಿನ್ನೆ ರಾತ್ರಿ ನಡೆದ ಅವರ (ಇರಾನ್) ಡ್ರೋನ್ ದಾಳಿ ಸಂಪೂರ್ಣ ಖಂಡನೀಯವಾಗಿದೆ” ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಹಾರ್ಮುಜ್ ಜಲಸಂಧಿ ಸಮೀಪ ಹಡಗುಗಳ ಮೇಲಿನ ಇತ್ತೀಚಿನ ದಾಳಿಗಳ ವಿರುದ್ಧ ತೀವ್ರ ಪ್ರತಿಭಟನೆ ದಾಖಲಿಸಲು ನವದೆಹಲಿ ಶುಕ್ರವಾರ ಎರಡನೇ ಬಾರಿ ಅಮೆರಿಕದ ಚಾರ್ಜ್ ಡಿ’ಅಫೇರ್ಸ್ ಜೇಸನ್ ಮೀಕ್ಸ್ ಅವರನ್ನು ಕರೆಸಿಕೊಂಡ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಈ ಘಟನೆಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಮೂರು ಹಡಗುಗಳ ಮೇಲೆ ನಡೆದ ದಾಳಿಗಳು ಜಲಸಂಧಿ ಸಮೀಪ ನಿಯೋಜಿತವಾಗಿದ್ದ ಅಮೆರಿಕ ನೌಕಾಪಡೆಯಿಂದ ನಡೆದಿವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಗುರುವಾರ ದೃಢಪಡಿಸಿತ್ತು.
ಈ ಹಿಂದಿನ ಹೇಳಿಕೆಗಳಲ್ಲಿ ಅಮೆರಿಕ ನೌಕಾಪಡೆ ದಾಳಿಗಳನ್ನು ಒಪ್ಪಿಕೊಂಡಿದ್ದು, ನೌಕಾ ದಿಗ್ಬಂಧನವನ್ನು ಉಲ್ಲಂಘಿಸಿ ಇರಾನಿನಿಂದ ತೈಲ ಸಾಗಿಸಲು ಪ್ರಯತ್ನಿಸುತ್ತಿದ್ದ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದಾಗಿ ತಿಳಿಸಿತ್ತು.
ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಹಡಗುಗಳ ಮೇಲಿನ ಅಮೆರಿಕದ ದಾಳಿಯನ್ನು ಇರಾನ್ ಖಂಡಿಸಿದ್ದು, ಇಂತಹ ಕ್ರಮಗಳು “ಜಾಗತಿಕ ಶಾಂತಿ ಮತ್ತು ಭದ್ರತೆಗೆ ಬೆದರಿಕೆ” ಎಂದು ಹೇಳಿದೆ.

ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ, ಅಮೆರಿಕವನ್ನು ಅಂತರರಾಷ್ಟ್ರೀಯ ಸಮುದಾಯ ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅಮೆರಿಕದ ನಡೆ “ಜಾಗತಿಕ ಶಾಂತಿ ಮತ್ತು ಭದ್ರತೆಗೆ ನಿರಂತರ ಬೆದರಿಕೆಯನ್ನು ಉಂಟುಮಾಡುತ್ತಿದ್ದು, ಸಂಚಾರ ಸ್ವಾತಂತ್ರ್ಯಕ್ಕೂ ಅಪಾಯವನ್ನು ಸೃಷ್ಟಿಸುತ್ತಿದೆ” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಅಮೆರಿಕ ಮತ್ತು ಇರಾನ್ ನಡುವಿನ ಪ್ರಸ್ತಾವಿತ ಕದನ ವಿರಾಮ ಒಪ್ಪಂದದ ಪ್ರಮುಖ ಅಂಶಗಳಿಗೆ ಟೆಹ್ರಾನ್ ನ “ಉನ್ನತ ಮಟ್ಟದ” ನಾಯಕತ್ವ ಅನುಮೋದನೆ ನೀಡಿದೆ ಎಂದು ಹೇಳಿಕೊಂಡ ಒಂದು ದಿನದ ಬಳಿಕ ಟ್ರಂಪ್ ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ. ಇರಾನ್ ಉಲ್ಲೇಖಿಸಿರುವ ಒಪ್ಪಂದದ ಕೆಲವು ನಿಯಮಗಳು ಪರಸ್ಪರ ಒಪ್ಪಿಗೆಯ ಭಾಗವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಇರಾನ್ ನಾಯಕತ್ವವನ್ನು “ನಿಭಾಯಿಸಲು ತುಂಬಾ ಅವಮಾನಕರ ಜನರು” ಎಂದು ಕರೆದಿರುವ ಟ್ರಂಪ್, “ಅವರೊಂದಿಗೆ ಉತ್ತಮ ನಂಬಿಕೆಯಿಂದ ಯಾವುದೇ ವ್ಯವಹಾರ ನಡೆಸಲು ಸಾಧ್ಯವಿಲ್ಲ” ಎಂದು ಟೀಕಿಸಿದ್ದಾರೆ.
















