ಕೋಲ್ಕತ್ತಾ: ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ಕೋಲ್ಕತ್ತಾ ಪೊಲೀಸರು ಹಾಗೂ ಪಶ್ಚಿಮ ಮೇದಿನಿಪುರ ಪೊಲೀಸರ ಜಂಟಿ ತಂಡ ಕೇಂದ್ರ ಪಡೆಗಳ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಕಾರ್ಯಾಚರಣೆ ಶನಿವಾರ ಮುಂಜಾನೆ 3 ಗಂಟೆಯ ನಂತರ ಆರಂಭಗೊಂಡಿದ್ದು, ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಮುಂದುವರಿದಿದೆ. ಈ ಬೆಳವಣಿಗೆಗೆ ಟಿಎಂಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಅಧಿಕಾರಿಗಳು ಅಭಿಷೇಕ್ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸಕ್ಕೆ ತೆರಳಿ ಹಲವು ಬಾರಿ ಬಾಗಿಲು ತಟ್ಟಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಇನ್ನೊಂದೆಡೆ, ಪೊಲೀಸರು ಬೀಗ ಒಡೆದು ಬಲವಂತವಾಗಿ ಮನೆ ಪ್ರವೇಶಿಸಿ ಶೋಧ ಕಾರ್ಯ ನಡೆಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.

ಶೋಧ ಕಾರ್ಯಾಚರಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, ಪೊಲೀಸರು ಬೀಗ ಒಡೆದು ಮನೆ ಪ್ರವೇಶಿಸಿದ್ದು, ಸಂಪೂರ್ಣ ಆವರಣವನ್ನು ಶೋಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. “ಅವರು ಬೀಗವನ್ನು ಒಡೆದು ಇಡೀ ಮನೆಯನ್ನು ಶೋಧಿಸಿದ್ದಾರೆ” ಎಂದು ಅಭಿಷೇಕ್ ಬ್ಯಾನರ್ಜಿ ತಿಳಿಸಿದ್ದಾರೆ.
ಕಾರ್ಯಾಚರಣೆಯ ಅವಧಿಯಲ್ಲಿ ಕಾಲಿಘಾಟ್‌ನ ಪಟುವಾಪಾರ ಪ್ರದೇಶದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಕೇಂದ್ರ ಪಡೆಗಳು ಸುತ್ತಮುತ್ತಲಿನ ಪ್ರದೇಶವನ್ನು ಭದ್ರತಾ ವಲಯಕ್ಕೆ ಒಳಪಡಿಸಿದ್ದರೆ, ಕಾಲಿಘಾಟ್ ಹಾಗೂ ಭಬಾನಿಪುರ ಪೊಲೀಸ್ ಠಾಣೆಗಳ ಸಿಬ್ಬಂದಿ ಶೋಧ ಕಾರ್ಯಕ್ಕೆ ಸಹಕಾರ ನೀಡಿದರು.
ಪಶ್ಚಿಮ ಮೇದಿನಿಪುರ ಜಿಲ್ಲೆಯ ಸಲ್ಬೋನಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಆರ್ಥಿಕ ವಂಚನೆ ಪ್ರಕರಣದ ತನಿಖೆಯ ಭಾಗವಾಗಿ ಈ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಪ್ರಕರಣದ ಸ್ವರೂಪ ಹಾಗೂ ಶೋಧ ಕಾರ್ಯದ ವೇಳೆ ಸಂಗ್ರಹಿಸಲಾಗಿರುವ ಮಾಹಿತಿಯ ಕುರಿತು ಹೆಚ್ಚಿನ ವಿವರಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.














