ಮನೆ ರಾಜ್ಯ ಧಾರವಾಡದಿಂದ ಬೆಳಗಾವಿಗೆ ಝೀರೊ ಟ್ರಾಫಿಕ್‌ ನಲ್ಲಿ ಸಾಗಿತು ಬಾಲಕಿಯ ಹೃದಯ: ಅಂಗಾಂಗ ದಾನದಿಂದ ನಾಲ್ಕು ಮಂದಿಯ...

ಧಾರವಾಡದಿಂದ ಬೆಳಗಾವಿಗೆ ಝೀರೊ ಟ್ರಾಫಿಕ್‌ ನಲ್ಲಿ ಸಾಗಿತು ಬಾಲಕಿಯ ಹೃದಯ: ಅಂಗಾಂಗ ದಾನದಿಂದ ನಾಲ್ಕು ಮಂದಿಯ ಜೀವನಕ್ಕೆ ಬೆಳಕು

0

ಧಾರವಾಡ (Dharwad): ಮೆದುಳು ನಿಷ್ಕ್ರಿಯಗೊಂಡ ಯುವತಿಯ ಅಂಗಾಂಗಳು ನಾಲ್ಕು ಜನರ ಜೀವನಕ್ಕೆ ಬೆಳಕು ನೀಡಿದೆ. ಝೀರೊ ಟ್ರಾಫಿಕ್ ಮೂಲಕ ಇಲ್ಲಿನ ಎಸ್‌ಡಿಎಂಯಿಂದ ಅಂಗಾಂಗಗಳನ್ನು ಸಾಗಿಸಲಾಯಿತು.

ಆಸ್ಪತ್ರೆಯಿಂದ ಸೋಮವಾರ ಸಂಜೆ ಸುಮಾರು 4.30ರ ಹೊತ್ತಿಗೆ ಹೊರಟ ಆಂಬುಲೆನ್ಸ್‌ಗಳು ಸಾಗುವ ಮಾರ್ಗದಲ್ಲಿ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

17 ವರ್ಷದ ಬಾಲಕಿ ಇಲ್ಲಿನ ಎಸ್‌ಡಿಎಂ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಬಾಲಕಿಯ ಮೆದುಳು ನಿಷ್ಕ್ರಿಯಗೊಂಡಿತು.

ಮಗಳನ್ನು ಕಳೆದುಕೊಂಡ ದುಃಖದ ನಡುವೆಯೂ ಆಕೆಯ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿ ಬಾಲಕಿಯ ಪೋಷಕರು ಮಾನವೀಯತೆ ಮೆರೆದಿದ್ದಾರೆ.

ಬಾಲಕಿಯ ಹೃದಯ, ಯಕೃತ್‌, ಮೂತ್ರಪಿಂಡ ವನ್ನು ದಾನ ಮಾಡಲಾಗಿದೆ. ಹೃದಯವನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನಿಗೆ ನೀಡಲು ಇಲ್ಲಿಂದ ಆಂಬುಲೆನ್ಸ್ ಮೂಲಕ ಕೊಂಡೊಯ್ಯಲಾಯಿತು. ಹಾಗೆಯೇ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಯಕೃತ್ ಕಸಿ ಮಾಡಲಾಗುತ್ತಿದ್ದು, ಅದಕ್ಕಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣವರೆಗೆ ಝೀರೊ ಟ್ರಾಫಿಕ್‌ ಮೂಲಕ ಆಂಬುಲೆನ್ಸ್‌ಗಳು ತೆರಳಿದವು.

ಎರಡು ಮೂತ್ರಪಿಂಡಗಳಲ್ಲಿ ಒಂದು ಎಸ್‌ಡಿಎಂ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ತತ್ವದರ್ಶಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರಿಗೆ ಕಸಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.