ಮೈಸೂರು(Mysuru): ಸರ್ಕಾರದ ಎಲ್ಲಾ ಸಚಿವರು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಂಕಷ್ಟದ ಸಮಯದಲ್ಲಿ ಜನರೊಂದಿಗೆ ನಿಂತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ನಾಲ್ಕು ಜಿಲ್ಲೆಗಳ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾನೂ ಇಂದು ಮಡಿಕೇರಿ, ಮಂಗಳೂರು, ಉಡುಪಿ ಪ್ರವಾಸ ಕೈಗೊಂಡಿದ್ದೇನೆ. ಅಲ್ಲಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುತ್ತೇನೆ. ಸಂಕಷ್ಟದಲ್ಲಿರುವ ಜನರ ಜೊತೆ ನಾವು ನಿಲ್ಲುತ್ತೇವೆ ಎಂದು ತಿಳಿಸಿದರು.
ಮಳೆ ಹಾನಿ ಕುರಿತು ಕೆಲವು ಮಾಹಿತಿಗಳಿವೆ. ಪ್ರಾಣಹಾನಿ, ಮನೆ ಕುಸಿತ, ಕೃಷಿ ಸರ್ವೇ ನಡೆದಿದೆ. ಮುಖ್ಯವಾಗಿ ಈ ಬಾರಿ ಮಳೆಯಲ್ಲಿ ರಸ್ತೆ ಸಂಪರ್ಕ ಕಡಿತವಾಗಿದೆ. ಕೆಲವು ಕಡೆ ಭೂಕುಸಿತವಾಗಿದೆ. ಕಳೆದ ಬಾರಿ ಕೂಡ ಭೂ ಕುಸಿತವಾಗಿತ್ತು. ಕೊಡಗು ಬಳಿ ಭೂಕಂಪವಾಗಿದೆ. ಕಡಲ ತೀರದಲ್ಲಿ ಕಡಲಕೊರೆತವಾಗಿದೆ. ಉತ್ತರ ಕರ್ನಾಟಕದಲ್ಲಿ ನದಿ ಪಕ್ಕದಲ್ಲಿರುವ ಮನೆಗಳಿಗೆ ತೊಂದರೆಯಾಗಿದೆ. ಅಲ್ಲಲ್ಲಿ ಅಲ್ಲಲ್ಲಿ ನೀರು ಜಲಾಶಯದಿಂದ ಹೆಚ್ಚು ಬಿಟ್ಟ ಸಂದರ್ಭದಲ್ಲಿ ಬೆಳೆ ಹಾನಿಯಾಗಿತ್ತು. ಅಷ್ಟೂ ಕೂಡ ಸಮೀಕ್ಷೆ ಆಗಿದೆ. ಪ್ರಥಮ ಹಂತದ ಸಮೀಕ್ಷೆ ಇಂದು ಸಾಯಂಕಾಲ ಸಿಗಲಿದೆ. ಸಮೀಕ್ಷೆ ಮಾಡಿ ಬಂದ ನಂತರ ನಿಖರವಾಗಿ ಹೇಳುತ್ತೇನೆ ಎಂದು ತಿಳಿಸಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣೆಯಲ್ಲಿ 739ಕೋಟಿ ಹಣ ಇದೆ. ಹಣದ ಕೊರತೆ ಇಲ್ಲ, ರೆಸ್ಕ್ಯೂ ಮತ್ತು ರಿಲೀಪ್ ಕಾರ್ಯಾಚರಣೆಗೆ ಯಾವುದೇ ರೀತಿ ಹಣದ ಕೊರತೆ ಇಲ್ಲ ಎಂದು ಹೇಳಿದರು.
ಶಾಶ್ವತ ಪರಿಹಾರಕ್ಕೆ ಕ್ರಮ
ಕೆಲವು ಕಡೆ ಸ್ಥಳಾಂತರ ಕಾರ್ಯ ನಡೆದಿದೆ. ಉತ್ತರ ಕರ್ನಾಟಕದಲ್ಲಿ 63 ಊರುಗಳನ್ನು ಶಿಫ್ಟ್ ಮಾಡಿದ್ದೇವೆ. ಶಾಶ್ವತವಾಗಿ ಏನು ಪರಿಹಾರ ಮಾಡಬಹುದು, ನದಿ ಪಾತ್ರದ ಪಕ್ಕದಲ್ಲಿರುವ ಗ್ರಾಮಗಳಿಗೆ ಪೂರ್ಣಪ್ರಮಾಣದಲ್ಲಿ ಗ್ರಾಮಗಳಿಲ್ಲದಿದ್ದರೂ ನದಿಪಾತ್ರದಲ್ಲಿರುವ ಮನೆಗಳನ್ನು ಶಿಫ್ಟ್ ಮಾಡಿ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ತಜ್ಞರ ಅಭಿಪ್ರಾಯ ಕೇಳಿದ್ದೇನೆ. ಆ ಪ್ರಕಾರ ಒಂದು ವಿಶೇಷವಾದ ಯೋಜನೆಯನ್ನು ಬರುವಂತಹ ದಿನಗಳಲ್ಲಿ ಮಾಡುತ್ತೇವೆ ಎಂದರು.
ಕೊಡಗಿನಲ್ಲಿ ಬೆಟ್ಟದ ಮೇಲೆ ಮನೆ ಇದೆ. ಎಲ್ಲಿ ಜನರ ಪ್ರಾಣ, ಆಸ್ತಿ ಹಾನಿ ಇದೆ ಅಲ್ಲಿ ಅವರ ಮನವೊಲಿಸುವ ಕೆಲಸ ಮಾಡಲಾಗುವುದು. ಕೆಲವು ಸೂಕ್ಷ್ಮ ಪ್ರದೇಶಗಳಿದ್ದು, ಅಲ್ಲಿ ಕಳೆದ ಬಾರಿ ಆದಲ್ಲೇ ಕೆಲವು ಭೂ ಕುಸಿತವಾಗುತ್ತಿದೆ. ಅಲ್ಲಿ ನಾವು ಮುಂಜಾಗರೂಕತೆ ವಹಿಸಿದ್ದೇವೆ.
ನಿಗಮ ಮಂಡಳಿಗಳಲ್ಲಿ ಹೊಸಬರಿಗೆ ಅವಕಾಶ
ನಿಗಮ ಮಂಡಳಿ ಕುರಿತು ಕೋರ್ ಕಮಿಟಿಯಲ್ಲಿ ಈಗಾಗಲೇ 6ತಿಂಗಳ ಹಿಂದೆ ಯಾರಿಗೆ ಒಂದೂವರೆ ವರ್ಷ ಮೇಲಾಗಿದೆ ಅವರನ್ನು ತೆಗೆದು ಹೊಸಬರಿಗೆ ಅವಕಾಶ ಕೊಡಬೇಕೆನ್ನುವ ತೀರ್ಮಾನವಾಗಿದೆ ಎಂದು ಹೇಳಿದರು.
ಯಾವ ಸಚಿವರು ಎಲ್ಲೆಲ್ಲಿ ಪ್ರವಾಸ ?
ಉಡುಪಿಯಲ್ಲಿ ಸಚಿವ ಅಂಗಾರ , ದಕ್ಷಿಣ ಕನ್ನಡದಲ್ಲಿ ಸಚಿವ ಸುನಿಲ್ ಕುಮಾರ್ ಉತ್ತರ ಕನ್ನಡ ದಲ್ಲಿ ಶ್ರೀನಿವಾಸ ಪೂಜಾರಿ ಆಗಲೇ ಹೋಗಿದ್ದಾರೆ. ಇವತ್ತು ಸೋಮಶೇಖರ್ ಪಿರಿಯಾಪಟ್ಟಣ ಹೋಗುತ್ತಿದ್ದಾರೆ. ಕಂದಾಯ ಸಚಿವರು ಕೊಡಗು, ಚಿಕ್ಕಮಗಳೂರು ಹೋಗಿಬಂದಿದ್ದಾರೆ. ನಿನ್ನೆ ಲೋಕೋಪಯೋಗಿ ಸಚಿವರು ಶಿರಾಡಿ ಘಾಟ್ ಎಲ್ಲ ಹೋಗಿದ್ದಾರೆ. ಇಡೀ ಸರ್ಕಾರವೇ ಕೆಲದಲ್ಲಿ ತೊಡಗಿಸಿಕೊಂಡಿದೆ. ಅಧಿಕಾರಿಗಳೂ ತೊಡಗಿಸಿಕೊಂಡಿದ್ದಾರೆ. ಸಂಕಷ್ಟ ಕಾಲದಲ್ಲಿ ಜನರ ಜೊತೆ ನಿಲ್ಲುತ್ತೇವೆ ಎಂದುತ್ತರಿಸಿದರು.
ಚಾಮರಾಜಪೇಟೆ ಈದ್ಗಾ ಮೈದಾನ ಕುರಿತು ಪ್ರತಿಕ್ರಿಯಿಸಿ ಅದನ್ನು ಸ್ಥಳೀಯ ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದರು.
ಈ ಸಂದರ್ಭ ಸಚಿವರುಗಳಾದ ವಿ.ಸುನೀಲ್ ಕುಮಾರ್, ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.