ಮನೆ ರಾಜ್ಯ ಅಧಿಕಾರಿಗಳ ಅಸಹಕಾರ ಆರೋಪ: ಗ್ರಾಮ ಒನ್ ಪ್ರಾಂಚೈಸಿ ಹಿಂಪಡೆಯುತ್ತಿರುವ ಪ್ರತಿನಿಧಿಗಳು

ಅಧಿಕಾರಿಗಳ ಅಸಹಕಾರ ಆರೋಪ: ಗ್ರಾಮ ಒನ್ ಪ್ರಾಂಚೈಸಿ ಹಿಂಪಡೆಯುತ್ತಿರುವ ಪ್ರತಿನಿಧಿಗಳು

0

ಮಂಡ್ಯ(Mandya): ಸಾರ್ವಜನಿಕ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಜಾರಿಗೊಳಿಸಲಾಗಿದ್ದು, ಪ್ರತಿನಿಧಿಗಳಿಗೆ ಅಧಿಕಾರಿಗಳಿಂದ ಸಿಗಬೇಕಾದ ಸಹಕಾರ ಸಿಗದೇ, ಅನಾವಶ್ಯಕ ಷರತ್ತುಗಳಿಗೆ ಬೇಸತ್ತು ಕೇಂದ್ರದ ಪ್ರತಿನಿಧಿಗಳು ಪ್ರಾಂಚೈಸಿಯನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ.

ಇ-ಆಡಳಿತ ಇಲಾಖೆಯ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಪಿಎಸ್) ಗ್ರಾಮ ಒನ್ ಪರಿಕಲ್ಪನೆಯೊಂದಿಗೆ ಜಾರಿಗೊಳಿಸುತ್ತಿದೆ. ಸೇವಾಸಿಂಧು ಪೋರ್ಟಲ್ ಗಳಲ್ಲಿ ದೊರೆಯುತ್ತಿದ್ದ 750 ಸೇವೆಗಳು ಗ್ರಾಮ ಒನ್ ನಲ್ಲಿ  ದೊರೆಯಲಿದೆ. 

ಮಂಡ್ಯ ಜಿಲ್ಲೆಯಲ್ಲಿ 234 ಗ್ರಾಮ ಪಂಚಾಯತ್ ಗಳಿದ್ದು, ಹಲವು ಗ್ರಾಪಂಗೆ 2 ಗ್ರಾಮ ಒನ್ ಕೇಂದ್ರಗಳಿದ್ದು, ಒಟ್ಟು 325 ಕೇಂದ್ರಗಳಿಗೆ ಪ್ರಾಂಚೈಸಿ ನೀಡಲಾಗಿದೆ. ಆದರೆ ಜಿಲ್ಲೆಯಲ್ಲಿ ಕೇವಲ 70-100 ಸೇವಾ ಕೇಂದ್ರಗಳು ಆರಂಭವಾಗಿದ್ದು, ಅಧಿಕಾರಿಗಳ ಅಸಹಕಾರದಿಂದಾಗಿ ಪ್ರಾಂಚೈಸಿದಾರರು ಉಳಿದೆಡೆ ಕೇಂದ್ರ ಆರಂಭಿಸಿಲ್ಲ.

ಅಧಿಕಾರಿಗಳ ಅಸಹಕಾರ:

ಬಂಡವಾಳ ಹಾಕಿ ಸೇವಾ ಕೇಂದ್ರ ತೆರೆಯಲು  ಸಿದ್ದರಿರುವ ಖಾಸಗಿ ಪ್ರತಿನಿಧಿಗಳಿಗೆ ಮಾರ್ಗದರ್ಶನ ನೀಡಲು  ಅಧಿಕಾರಿಗಳು ತಯಾರಿಲ್ಲ. ಮಾತ್ರವಲ್ಲದೇ ಪ್ರಾಂಚೈಸಿ ಕಿತ್ತು ಹಾಕುವ ಬೆದರಿಕೆ  ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಧಿಕಾರಿಗಳ ಕಿರುಕುಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಸೇವಾ ಪ್ರತಿನಿಧಿಗಳು ಒತ್ತಾಯಿಸುತ್ತಿದ್ದಾರೆ.

ನಿಯಮಗಳೇನು ?

ವಾರದ 7 ದಿನವೂ ಕೆಲಸ ಮಾಡಬೇಕು. ಕೇಂದ್ರಕ್ಕೆ ಬಣ್ಣ ಬಳಿಸಬೇಕು. ದರಪಟ್ಟಿ ಪ್ರದರ್ಶಿಸಬೇಕು.  ಸಿಬ್ಬಂದಿ ಸಮವಸ್ತ್ರ ಧರಿಸಬೇಕು. ರಜೆ ಪಡೆಯಲು ತಹಶೀಲ್ದಾರ್ ಗೆ ಕರೆ ಮಾಡಬೇಕು ಎಂಬ ನಿಯಮ ಪ್ರತಿನಿಧಿಗಳಿಗೆ ಕಿರಿಕಿರಿ ಉಂಟುಮಾಡಿದೆ. ಅಲ್ಲದೇ ಈ ನಿಯಮಗಳನ್ನು ಅಧಿಕಾರಿಗಳೇ ಪಾಲಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ದುಬಾರಿ ಸೇವೆಗಳು:

ಗ್ರಾಮ ಒನ್ ನಲ್ಲಿ ದೊರೆಯುವ ಸೇವೆಗಳು ನಾಡಕಚೇರಿ ಸೇವೆಗಳಿಗಿಂತ ದುಬಾರಿಯಾಗಿದೆ. ಆದಾಯ-ಜಾತಿ ಪ್ರಮಾಣ ಪತ್ರಕ್ಕೆ ನಾಡಕಚೇರಿಯಲ್ಲಿ 40 ಶುಲ್ಕ ನಿಗದಿ ಮಾಡಲಾಗಿದೆ. ಆದರೆ ಗ್ರಾಮ ಒನ್ ನಲ್ಲಿ 75 ಶುಲ್ಕ ನೀಡಬೇಕು ಸೇವಾ ಸಿಂಧು ಪೋರ್ಟಲ್  ನಲ್ಲಿ ಕಾರ್ಮಿಕರ ಗುರುತಿನ ಚೀಟಿ ಪಡೆಯಲು ಯಾವುದೇ  ಶುಲ್ಕವಿಲ್ಲ. ಆದರೆ ಗ್ರಾಮ ಒನ್ ನಲ್ಲಿ 40 ರೂ ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳು ಬಸ್ ಪಾಸ್ ಗೆ ಅರ್ಜಿ ಸಲ್ಲಿಸಲು 35 ರೂ ನಿಗದಿ ಮಾಡಲಾಗಿದೆ.

ಸಾರ್ವಜನಿಕ ಲಾಗಿನ್ ನಲ್ಲಿ ಸರ್ವರ್ ಸಮಸ್ಯೆ

ಸೇವಾ ಸಿಂಧು ಪೋರ್ಟಲ್ ನಲ್ಲಿ ಸಾರ್ವಜನಿಕರು ನೇರವಾಗಿ ಲಾಗಿನ್ ( ಸಿಟಿಜನ್ ಲಾಗಿನ್) ಆಗಿ ಸೇವೆ ಪಡೆಯಬಹುದು.  ಅದಕ್ಕೆ ಸೇವಾ ಶುಲ್ಕ ಇರುವುದಿಲ್ಲ. ಗ್ರಾಮ ಒನ್ ಆರಂಭವಾದ ನಂತರ ಸಾರ್ವಜನಿಕ  ಲಾಗಿನ್ ನಲ್ಲಿ ಸರ್ವರ್ ಸಮಸ್ಯೆಯಾಗಿರುವುದು ಅನುಮಾನಾಸ್ಪದವಾಗಿದೆ. ಜನರನ್ನು ಗ್ರಾಮ ಒನ್ ಗೆ ಕಳುಹಿಸುವುದಕ್ಕಾಗಿಯೇ ಕೃತಕ ಸಮಸ್ಯೆ ಸೃಷ್ಠಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಮೈಸೂರಿನಲ್ಲಿಯೂ ಗ್ರಾಮ ಒನ್ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, ನೆರೆಯ ಜಿಲ್ಲೆಯಲ್ಲಿ ಉಂಟಾದ ಈ ಸಮಸ್ಯೆಗಳು ಮೈಸೂರಿನಲ್ಲಿ ಆಗದಿರಬೇಕಾದರೆ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ.

ಹಿಂದಿನ ಲೇಖನಇಂದು ಚಾಮರಾಜಪೇಟೆ ಬಂದ್: ಸೂಕ್ತ ಪೊಲೀಸ್ ಬಂದೋ ಬಸ್ತ್
ಮುಂದಿನ ಲೇಖನಸಂಕಷ್ಟದ ಸಮಯದಲ್ಲಿ ಜನರೊಂದಿಗೆ ನಾವಿದ್ದೇವೆ: ಸಿಎಂ ಬೊಮ್ಮಾಯಿ