ಮನೆ ಆರೋಗ್ಯ ದೇಹದ ತೂಕ ಹೆಚ್ಚಿಸಿಕೊಂಡು ಫಿಟ್‌ ಆಗಿರಲು ಇಲ್ಲಿದೆ ಟಿಪ್ಸ್‌

ದೇಹದ ತೂಕ ಹೆಚ್ಚಿಸಿಕೊಂಡು ಫಿಟ್‌ ಆಗಿರಲು ಇಲ್ಲಿದೆ ಟಿಪ್ಸ್‌

0

ದೇಹದ ತೂಕವನ್ನು ಹೆಚ್ಚಿಸಿಕೊಂಡು ಫಿಟ್‌ ಆಗಿರಲು ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು, ಜೀವನಶೈಲಿ ಹೇಗಿರಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ನಿದ್ದೆ

ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಮುಖ್ಯವಾಗಿರುವುದು ನಿದ್ದೆ. ಹೀಗಾಗಿ 8 ರಿಂದ 9 ಗಂಟೆಗಳ ಕಾಲ ನಿದ್ದೆ ಮಾಡುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ದೇಹಕ್ಕೆ ವಿಶ್ರಾಂತಿ ಸಿಕ್ಕಾಗ ಮಾತ್ರ ಆರೋಗ್ಯವಾಗಿರಲು ಸಾಧ್ಯ. ದೇಹದ ಸುಸ್ತು ಕಡಿಮೆಯಾಗಿ, ಒತ್ತಡ ಮುಕ್ತವಾಗಿದ್ದರೆ ಆರಾಮದಲ್ಲಿ ಸಣಕಲು ದೇಹದ ತೂಕವನ್ನು ಹೆಚ್ಚಿಸಿಕೊಂಡು ಫಿಟ್‌ ಆಗಿ ಇರಬಹುದು.

ಮೊಟ್ಟೆ, ಡೈರಿ ಉತ್ಪನ್ನಗಳ ಬಳಕೆ

ದೇಹದ ತೂಕ ಹೆಚ್ಚಿಸಿಕೊಳ್ಳಲು ಹಾಲು, ಚೀಸ್‌ ಮೊಸರು ಸೇರಿ ಎಲ್ಲಾ ರೀತಿಯ ಡೈರಿ ಉತ್ಪನ್ನಗಳು ಸಹಾಯಕವಾಗಿದೆ. ಪ್ರತಿದಿನ ಊಟದಲ್ಲಿ ತುಪ್ಪದ ಸೇವನೆ ಮಾಡುತ್ತಾ ಬಂದರೆ ದೇಹದ ತೂಕ ಹೆಚ್ಚಾಗುತ್ತದೆ. ಅಥವಾ ನೀವು ಆಹಾರವನ್ನು ತಯಾರಿಸುವಾಗಲೂ ಕೂಡ ಎಣ್ಣೆಯ ಬದಲು ತುಪ್ಪವನ್ನು ಬಳಸಬಹುದು. ಇದರಿಂದ ಆಹಾರದ ರುಚಿಯೂ ಹೆಚ್ಚಾಗುತ್ತದೆ ಜೊತೆಗೆ ಸಣ್ಣಗಿನ ದೇಹದಿಂದ ಮುಕ್ತಿ ಪಡೆಯಬಹುದಾಗಿದೆ. ಅದರ ಜೊತೆಗೆ ಮಾಂಸಹಾರಿಗಳಾದರೆ ಮೊಟ್ಟೆ, ಮೀನು ಸೇವನೆ ಮಾಡಬಹುದು. ಈ ಆಹಾರಗಳಿಂದ ಆರೋಗ್ಯಯುತ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

​ಹಣ್ಣು ಮತ್ತು ಡ್ರೈಫ್ರೂಟ್ಸ್‌ ಸೇವನೆ

ಹಣ್ಣುಗಳಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲೋರಿ, ಫೈಬರ್‌, ಪ್ರೋಟೀನ್‌ ಅಂಶವಿರುತ್ತದೆ. ಹೀಗಾಗಿ ದೇಹದ ತೂಕ ಹೆಚ್ಚಿಸಿಕೊಳ್ಳಬೇಕು ಎನ್ನುವವರು ನಿಯಮಿತ ಹಣ್ಣುಗಳ ಸೇವನೆ ಮಾಡಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ. ಬಾಳೆಹಣ್ಣು, ಸೇಬು, ಕಿತ್ತಳೆ, ಅವಕಾಡೋ, ಬೆರಿ ಹಣ್ಣುಗಳ ಸೇವನೆ ದೇಹವನ್ನು ಫಿಟ್‌ ಆಗಿಡಲು ಸಹಾಯ ಮಾಡುತ್ತವೆ. ಆದ್ದರಿಂದ ದಿನನಿತ್ಯ ಬೆಳಗ್ಗೆ ಮತ್ತು ಸಂಜೆ ಸ್ನ್ಯಾಕ್ಸ್‌ ರೀತಿಯಲ್ಲಿ ಹಣ್ಣುಗಳನ್ನು ಸೇವನೆ ಮಾಡಬೇಕು. ಅದರ ಜೊತೆಗೆ ದೇಹವನ್ನು ಫಿಟ್‌ ಆಗಿಡುವಂತೆ ಮಾಡುವ ಬಾದಾಮಿ, ಶೆಂಗಾ, ವಾಲ್ನಟ್‌, ಅಂಜೂರದಂತಹ ನಟ್ಸ್‌ಗಳ ಸೇವನೆ ಬಹಳ ಒಳ್ಳೆಯದು.

​ಊಟದ ಮೊದಲು ನೀರಿನ ಸೇವನೆ ಬೇಡ

ಆಯುರ್ವೇದದ ಪ್ರಕಾರ ಊಟಕ್ಕೂ ಮೊದಲು ಮತ್ತು ಊಟದ ವೇಳೆ ನೀರನ್ನು ಸೇವಿಸುವುದು ಒಳ್ಳೆಯದಲ್ಲ. ಇದು ದೇಹದ ತೂಕ ಏರಿಕೆಗೂ ಅನ್ವಯವಾಗುತ್ತದೆ. ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬೇಕೆಂದವರು ಊಟದ ಮಧ್ಯೆ ನೀರನ್ನು ಸೇವನೆ ಮಾಡದೆ, ಊಟವಾದ ಮೇಲೆ ಸ್ವಲ್ಪ ನೀರು ಮತ್ತು ಒಂದು ಗಂಟೆಯ ಬಳಿಕ ನೀರನ್ನು ಕುಡಿಯಬಹುದು. ಇದರಿಂದ ಕ್ರಮೇಣವಾಗಿ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

​ಹಸಿವಾಗದಂತೆ ನೋಡಿಕೊಳ್ಳುವುದು

ದೇಹಕ್ಕೆ ಯಾವಾಗ ಸರಿಯಾದ ಪ್ರಮಾಣದಲ್ಲಿ ಆಹಾರ ಸಿಗುವುದಿಲ್ಲವೋ ಆಗ ಶರೀರ ಸೊರಗುತ್ತದೆ. ಹೀಗಾಗಿ ಹಸಿವೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಪ್ರತಿ 4 ಗಂಟೆಗಳಿಗೊಮ್ಮೆ ಏನಾದರೂ ಸ್ವಲ್ಪ ಆಹಾರ ಸೇವನೆ ಮಾಡುತ್ತಿರಬೇಕು. ಉದಾಹರಣೆಗೆ ಬೆಳಗ್ಗೆ ತಿಂಡಿಯ ನಂತರ 11 ಗಂಟೆಯ ಸಮಯದಲ್ಲಿ ಹಣ್ಣುಗಳ ಸೇವನೆ ಮಾಡುವುದು, ಸಂಜೆ 6 ಗಂಟೆಯ ಹೊತ್ತಿಗೆ ನೆನೆಸಿದ ಕಾಳು, ತರಕಾರಿಗಳ ಸಲಾಡ್‌ ಸೇವನೆ ಮಾಡುತ್ತಾ ಬಂದರೆ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

​ಲಘು ವ್ಯಾಯಾಮ

ದೇಹದ ತೂಕವನ್ನು ಹೆಚ್ಚಿಸಿಕೊಂಡು ಫಿಟ್‌ಆಗಿ ಇರಬೇಕೆಂದರೆ ಪ್ರತಿದಿನ ಲಘು ವ್ಯಾಯಾಮದ ಅಭ್ಯಾಸವಿರಬೇಕು. ಪುಷ್‌ಅಪ್ಸ್‌, ಅರ್ಧಗಂಟೆ ವ್ಯಾಯಾಮಗಳ ಅಭ್ಯಾಸ ರೂಢಿಯಲ್ಲಿರಲಿ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗಿ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಯಾಕೆಂದರೆ ಆಹಾರವನ್ನು ತೆಗೆದುಕೊಂಡು ಹಾಗೆಯೇ ಮಲಗಿದರೆ ಅಥವಾ ಕುಳಿತುಕೊಂಡರೆ ಆರೋಗ್ಯಕರ ತೂಕ ಏರಿಕೆಯಗುವುದಿಲ್ಲ. ಬದಲಾಗಿ ಬೊಜ್ಜು ಬೆಳೆಯುತ್ತದೆ. ಹೀಗಾಗಿ ಆಹಾರ ಸೇವನೆಗೆ ತಕ್ಕಂತೆ ಲಘು ವ್ಯಾಯಾಮವಿದ್ದರೆ ಉತ್ತಮ.